ಬೆಳಗಾವಿ: ‘ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವೆಂಕಟಾಪುರ ಗ್ರಾಮದಲ್ಲಿ ಮೂರು ಕೃಷಿ ಹೊಂಡ ನಿರ್ಮಿಸದೇ ಬಿಲ್ ಎತ್ತಿದ್ದು ಗೊತ್ತಾಗಿದೆ. ಇದನ್ನು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕು.
ಸರ್ಕಾರಿ ಯೋಜನೆ ದುರ್ಬಳಕೆ ಮಾಡಿಕೊಂಡವರಿಂದ ಹಣ ವಸೂಲಿ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್ ತಿಳಿಸಿದರು.
‘ಕೃಷಿ ಹೊಂಡಗಳನ್ನು ಮಾಡದೇ ಅದರ ಫಲಾನುಭವಿಗಳು ಎಂದು ಹೇಳಿ ಹಣ ಲೂಟಿ ಮಾಡಲಾಗಿದೆ. ಮೂರು ಹೊಂಡಳಿಗೆ ತಲಾ ₹ 40 ಸಾವಿರ ಸೇರಿದಂತೆ ಒಟ್ಟು ₹ 1.20 ಲಕ್ಷ ಹಣ ಕಬಳಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರು ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ್ದೇನೆ. ಯಾರು ಹಣ ಪಡೆದುಕೊಂಡಿದ್ದಾರೋ ಅವರಿಂದ ತಲಾ ಶೇ 18ರಷ್ಟು ಬಡ್ಡಿ ಹೇರಿ ಎಲ್ಲ ಹಣ ವಸೂಲಿ ಮಾಡುವಂತೆ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬರುವ ಸೋಮವಾರ (ಜುಲೈ 25) ಇದರ ಪೂರ್ಣ ವರದಿ ಕೇಳಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಈ ಕಾಮಗಾರಿಯನ್ನು ನರೇಗಾದಿಂದ ಮಾಡಲಾಗಿದೆ. ಇದನ್ನು ಮಂಜೂರಾತಿ ನೀಡುವಾಗ ಇದ್ದ ತಾಂತ್ರಿಕ ಅಧಿಕಾರಿ ಈಗ ಇಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸಹಾಯಕ ಕೃಷಿ ಅಧಿಕಾರಿ, ಪಿಡಿಒ ಅವರಿಗೂ ನಿರ್ದೇಶನ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾಗಲು ತಿಳಿಸಿದ್ದೇನೆ’ ಎಂದರು.
‘ಯಾವುದೇ ಫಲಾನುಭವಿ ₹ 1 ಲಕ್ಷಕ್ಕಿಂತ ಹೆಚ್ಚು ಹಣ ಪಡೆದಿದ್ದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ಆದರೆ, ಇಲ್ಲಿ ಮೂವರಿಗೆ ತಲಾ ₹ 40 ಸಾವಿರ ಪಾವತಿಸಲಾಗಿದೆ ಎಂದು ತಿಳಿದಿದೆ. ಹಾಗಾಗಿ, ಅವರಿಂದ ಬಡ್ಡಿ ಸಮೇತ ಹಣ ವಸೂಲಿ ಮಾಡಲಾಗುವುದು. ತಪ್ಪೆಸಗಿದ ಅಧಿಕಾರಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು’ ಎಂದೂ ಅವರು ತಿಳಿಸಿದರು.