ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಭೀಮಗಡ ಅರಣ್ಯ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಮಂತುರ್ಗಾ ಸೇತುವೆ ಮೇಲೆ ನೀರು ಹರಿದಿದೆ. ಇದರಿಂದ ಕರ್ನಾಟಕ-ಗೋವಾ ರಾಜ್ಯ ಹೆದ್ದಾರಿ ಸಂಚಾರ ಗುರುವಾರ ಸಂಜೆ 5ರವರೆಗೂ ಬಂದ್ ಆಗಿತ್ತು.
ಅರಣ್ಯದಲ್ಲಿ ಬುಧವಾರ ರಾತ್ರಿಯಿಡೀ ಮಳೆ ಸುರಿಯಿದೆ. ಸಿಂಧನೂರು- ಹೆಮ್ಮಡಗಾ ಅಂತರರಾಜ್ಯ ಹೆದ್ದಾರಿ ಭಾಗಶಃ ಮುಳುಗಿ ಸಂಚಾರ ಬಂದ್ ಆಗಿತ್ತು. ಸಂಜೆ ವೇಳೆಗೆ ಇಳಿಮುಖವಾದ ನಂತರ ವಾಹನ ಸಂಚಾರ ಮತ್ತೆ ಆರಂಭವಾಯಿತು.
ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮುಂಜಾಗ್ರತೆಯಾಗಿತಾಲ್ಲೂಕಿನ ಗುಂಜಿ ಮತ್ತು ಜಾಂಬೋಟಿ ಹೋಬಳಿ ವ್ಯಾಪ್ತಿಯ 11 ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ 15ರಂದು ರಜೆ ಘೋಷಿಸಲಾಗಿದೆ. 30 ಸಣ್ಣ ಸೇತುವೆಗಳು ಮುಳುಗಿವೆ. 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮಲೆನಾಡು ಪ್ರದೇಶಗಳಾದ ಅಳ್ನಾವರ ಹಾಗೂ ಕಲಘಟಗಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಅಳ್ನಾವರದ ಕಂಬಾರಗಣವಿ ಗ್ರಾಮದ ಕಿರು ಸೇತುವೆ ಜಲಾವೃತಗೊಂಡು,ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾ, ತುಂಗಾ, ಶರಾವತಿ, ವರದಾ, ಕುಮದ್ವತಿ ನದಿಗಳು ಅಪಾಯದ ಮಟ್ಟ ಮೀರಿಹರಿಯುತ್ತಿವೆ. ಭದ್ರಾ ಜಲಾಶಯದ ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲಿಯೇ ನೀರು ಹರಿಸಲಾಗಿದೆ.
ಹೊಸಪೇಟೆ ವರದಿ: ತುಂಗಭದ್ರಾ ಜಲಾಶಯದಿಂದ ಗುರುವಾರ 1.41 ಲಕ್ಷ ಕ್ಯುಸೆಕ್ ನೀರು ಹರಿಸಿದ್ದು, ರಾಮ-ಲಕ್ಷ್ಮಣ ದೇವಸ್ಥಾನ, ಸಾಲು ಮಂಟಪಗಳು, ಕರ್ಮ ಮಂಟಪ ಮುಳುಗಿದೆ.
ಕಲಬುರಗಿ ವರದಿ: ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಾಳೆ ಹೊಲಗಳಲ್ಲಿ ನೀರು ಆವರಿಸಿಕೊಂಡಿದೆ.
ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿ, ಗುರುವಾರ ದಿನವಿಡೀ ಬಿರುಗಾಳಿಗೆ ಜನ ತತ್ತರಿಸಿದರು. ವಿವಿಧೆಡೆ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ. ವಾಹನಗಳಿಲ್ಲದೆ ಗ್ರಾಮೀಣ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಪರದಾಡಿದರು. ವಿವಿಧೆಡೆ ಮರ ಉರುಳಿದ್ದು, ಸಂಚಾರ ವ್ಯತ್ಯಯಗೊಂಡಿತ್ತು.
ತಗ್ಗಲಿದೆ ಮಳೆ
ಬೆಂಗಳೂರು: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಾದ್ಯಂತ ಮುಂದಿನ ನಾಲ್ಕು ದಿನಗಳ ಅವಧಿಯಲ್ಲಿ ಮಳೆಯ ತೀವ್ರತೆ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆಗಳು ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗೆ ಶುಕ್ರವಾರ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಇದೇ 14ರ ವೇಳೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಲಿದೆ. ಈ ಮೂರು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.