ಸಿಲಿಕಾನ್ ಸಿಟಿಯಲ್ಲಿ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ವಾಹನ ಚಲಾಯಿಸುವರ ಹಾವಳಿ ಹೆಚ್ಚಾಗಿಯೇ ಇದೆ. ಅದು ರಸ್ತೆ ತೆರಿಗೆಯಿಂದ ಪಾರಾಗಲು ಅಥವಾ ಕದ್ದ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬಳಸುತ್ತಿದ್ದಾರೆ.
ಇಂತಹ ವಾಹನಗಳನ್ನು ಪತ್ತೆ ಮಾಡಲು ಸಂಚಾರ ಪೊಲೀಸರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡಿರುವ ಸಿಸಿ ಕ್ಯಾಮರಾಗಳನ್ನು ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಿದ್ದಾರೆ. ಶಂಕಾಸ್ಪದ ವಾಹನಗಳು ಈ ಕ್ಯಾಮರಾದಲ್ಲಿ ಸೆರೆಯಾದರೆ ಕೂಡಲೇ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ಹೋಗಲಿದೆ. ಇಂತಹ ತಂತ್ರಜ್ಞಾನ ಬಳಸಿ ಎರಡು ಕಳ್ಳ ಕಾರುಗಳನ್ನು ಪತ್ತೆಹಚ್ಚಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಫೋರ್ಡ್ ಫಿಗೋ ಮತ್ತು ಮಾರುತಿ ಒಮ್ನಿ ಕಾರಿನ ನಂಬರ್‌ಗಳನ್ನು ಟೊಯೊಟ ಮತ್ತು ಬಿಎಂಡಬ್ಲ್ಯು ಕಾರಿಗೆ ಹಾಕಿಕೊಂಡು ಚಲಾಯಿಸುತ್ತಿರುವುದು ಸಂಚಾರ ಪೊಲೀಸರ ತಾಂತ್ರಿಕ ವಿಭಾಗದಿಂದ ಬೆಳಕಿಗೆ ಬಂದಿದೆ.
ಸಂಪರ್ಕರಹಿತ ನಿಯಮ ಜಾರಿ ಮಾಡಲು ಸಂಚಾರ ಪೊಲೀಸರು, ಪ್ರಮುಖ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾ ಮತ್ತು ತಂತ್ರಜ್ಞಾನ ಅಳವಡಿಸಿದ್ದಾರೆ. ಇದರಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಫೋರ್ಡ್ ಫಿಗೋ (ಕೆಎ.03-ಎಂಎಲ್.1304) ಮತ್ತು ಮಾರುತಿ ಒಮ್ನಿ (ಕೆಎ.03-ಎಂಸಿ.7007) ಕಾರು ಮಾಲೀಕರನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗಿದೆ. ಈ ಕಾರಿನ ನಂಬರ್‌ಗಳನ್ನು ಟೊಯೊಟ ಮತ್ತು ಬಿಎಂಡಬ್ಲ್ಯು ಕಾರಿಗೆ ಅಳವಡಿಸಿಕೊಂಡು ನಗರದಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ.