ಬೆಂಗಳೂರು: ರಾಜ್ಯಕ್ಕೆ 2 ದಿನ ಪ್ರವಾಸಕ್ಕೆ ಆಗಿಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವವಾಗಿ ಸ್ವಾಗತ ಮಾಡಲಾಯಿತು. ಅಷ್ಟೇ ಪ್ರೀತಿಯಿಂದ ಅವರಿಗೆ ಬೀಳ್ಕೊಡಲಾಗಿದೆ. ರಾಜ್ಯ ರಾಜಧಾನಿಗೆ ಪ್ರಧಾನಿ ಮೋದಿ ಅವರು ಭೇಟಿ ಹಿನ್ನೆಲೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ?
ಪ್ರಧಾನಿ ಆಗಮನದ ಹಿನ್ನೆಲೆ ರಸ್ತೆಯ ಥಳಕು-ಬಳಕಿಗಾಗಿ ಮತ್ತು ಮೂಲ ಸೌಕರ್ಯಕ್ಕಾಗಿ ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ಬರೋಬ್ಬರಿ 24 ಕೋಟಿ ರೂ. ಖರ್ಚು ಮಾಡಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನ ರಾಜ್ಯ ಪ್ರವಾಸ ಕೈಗೊಂಡಿದ್ದರು. ನಿನ್ನೆ(ಸೋಮವಾರ) ಬೆಂಗಳೂರಿಗೆ ಆಗಮಿಸಿದ್ದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೀಡುವ ಜತೆಗೆ ಕಟ್ಟಡಗಳನ್ನ ಉದ್ಘಾಟಿಸಿದ್ದರು. ಕಮ್ಮಘಟ್ಟದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲೂ ಪಾಲ್ಗೊಂಡಿದ್ದರು. ನಿನ್ನೆ ಬೆಂಗಳೂರಲ್ಲಿ ಪ್ರಧಾನಿ ಅವರು ನಾಲ್ಕೂವರೆ ತಾಸು ಇದ್ದರು. ಬೆಂಗಳೂರು ಕ್ಲೀನ್ ಸಿಟಿ ಎಂದು ತೋರಿಸಿಕೊಳ್ಳಲು ಬೆಂಗಳೂರಲ್ಲಿ ಪ್ರಧಾನಿ ಸಂಚರಿಸುವ ಮಾರ್ಗದ ರಸ್ತೆಗಳನ್ನು ಫಳಫಳ ಹೊಳೆಯುವಂತೆ ಬಿಬಿಎಂಪಿ ಮಾಡಿತ್ತು. ರಸ್ತೆಗಳನ್ನ ಚೆನ್ನಾಗಿ ಸ್ವಚ್ಛ ಮಾಡಲಾಗಿತ್ತು.
ಒಂದೇ ಒಂದು ಗುಂಡಿಯೂ ಕಾಣದಂತೆ ಮಾಡಲಾಗಿತ್ತು. ಕೊಂಪೆಯಂತಿದ್ದ ಕೊಮ್ಮಘಟ್ಟದಲ್ಲಿ ಮೂಲಸೌಕರ್ಯ ಇರಲಿಲ್ಲ. ರಸ್ತೆ ತುಂಬೆಲ್ಲಾ ಗಿಡಗಂಟಿ ಬೆಳೆದಿತ್ತಿ. ಮೋದಿ ಅವರು ಬರ್ತಾರೆ ಅಂತ ಕೊಮ್ಮಘಟ್ಟದ ರಸ್ತೆಗೆ ತರಾತುರಿಯಲ್ಲಿ ಬಿಬಿಎಂಪಿ ಡಾಂಬರೀಕರಣ ಮಾಡಿತ್ತು. ಹೆಲಿಪ್ಯಾಡ್ ನಿರ್ಮಾಣ ಮಾಡಿತ್ತು. ಈ ರಸ್ತೆಯನ್ನ ನೋಡಿ ಸ್ಥಳೀಯರೇ ಶಾಕ್ ಆಗಿದ್ದರು, ಇದು ನಮ್ಮ ಏರಿಯಾದ ರಸ್ತೆಯೇ ಎಂದು. ಪ್ರಧಾನಿ ಅವರು ಆಗಾಗ್ಗೆ ಇಲ್ಲಿಗೆ ಭೇಟಿ ಕೊಡಲಿ, ಆ ನೆಪದಲ್ಲಾದರೂ ರಸ್ತೆಗಳ ಅಭಿವೃಧ್ಧಿಗೆ ಬಿಬಿಎಂಪಿ ಮನಸು ಮಾಡುತ್ತೆ ಎಂದೂ ಮಾತಾಡಿಕೊಳ್ಳುತ್ತಿದ್ದಾರೆ.