ಬೆಂಗಳೂರು: ಕೊರೊನಾ ಲಾಕ್ಡೌನ್ ಆಗಿ ಒಂದು ತಿಂಗಳು ಕಳೆಯುತ್ತಿದ್ದು, ಸಾಕಷ್ಟು ಜನರು ಬಡ ಹಾಗೂ ಕೂಲಿ ಕಾರ್ಮಿಕರ ನೆರವಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಆದರೆ ಇಲ್ಲೊಬ್ಬ ವ್ಯಕ್ತಿ ರೈತನ ಜೀವನಾಧಾರವಾಗಿರುವ ಜಾನುವಾರುಗಳ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ನೆಲಮಂಗಲದ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಮಲ್ಲಯ್ಯ ಜಾನುವಾರುಗಳಿಗೆ ಮೇವು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ರೈಲ್ವೆ ಗೊಲ್ಲಹಳ್ಳಿ ಗ್ರಾಮದಲ್ಲಿ ಹೈನುಗಾರಿಕೆ ಆಧಾರಿತ ಕುಟುಂಬಗಳ ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಹಸುಗಳಿಗೆ ಹಸಿ ಮೇವು ಮತ್ತು ಪ್ರತಿಯೊಬ್ಬರಿಗೂ 1 ಮೂಟೆ ಬೂಸವನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.
ತೋಟದಲ್ಲಿ ಕೃಷಿಕ ಬೆಳೆದಿದ್ದ ಹಸಿರು ಮೇವನ್ನ ಖರೀದಿ ಮಾಡಿ, ರೈತರಿಂದಲೇ ಕಟಾವು ಮಾಡಿಸಿ ಹಳ್ಳಿಯ ಎಲ್ಲಾ ರೈತರಿಗೆ ಹಂಚಿದ್ದಾರೆ. ಅಲ್ಲದೇ ನಗರದಲ್ಲಿ ಜಾನುವಾರುಗಳ ಬೂಸವನ್ನ ಖರೀದಿ ಮಾಡಿ ಮಲ್ಲಯ್ಯ ರೈತರಿಗೆ ವಿತರಣೆ ಮಾಡಿ ಮಾನವೀಯತೆಯನ್ನ ಮೆರೆದಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಲ್ಲಯ್ಯ, ಸಾಕಷ್ಟು ಜನರು ಮಾನವೀಯತೆಯಿಂದ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಊಟ, ದಿನಸಿಯನ್ನ ವಿತರಣೆ ಮಾಡುತ್ತಿದ್ದಾರೆ. ಆದರೆ ರೈತರ ಜಾನುವಾರುಗಳು ಸಹ ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಳಜಿಯಂತೆ ನಾವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೊನಾ ಲಾಕ್ಡೌನ್ ವೇಳೆ ಮೇವು ನೀಡಿದ್ದೇವೆ ಎಂದರು.
ನನ್ನ ಕುಟುಂಬ ಹಾಗೂ ಸ್ನೇಹಿತರು ಕೂಡ ಕೈಜೋಡಿಸಿ ಅವರ ಸಹಕಾರದಿಂದ ರೈತರಿಗೆ ಅನುಕೂಲ ಮಾಡಿದ್ದೇವೆ. ಲಾಕ್ಡೌನ್ ಮುಗಿಯುವವರೆಗೂ ಹಾಗೂ ಮುಂದೆ ಸಮಾಜ ಸೇವೆಯಲ್ಲಿ ತೊಡಗಿ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನು ಮತ್ತೆ ನಮ್ಮ ಗೆಳೆಯರು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.