ಬೆಳಗಾವಿ: ‘ಬೆಳಗಾವಿಯ ಬಾಪಟ್ ಗಲ್ಲಿಯ ಶಾಹಿ ಮಸೀದಿಯನ್ನು ಮುಸ್ಲಿಮರು ಮತ್ತು ಬ್ರಾಹ್ಮಣರು ಸೇರಿಯೇ ನಿರ್ಮಿಸಿದ್ದಾರೆ. ಆದರೆ, ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮಸೀದಿ ವಿಚಾರವಾಗಿ ವಿವಾದ ಸೃಷ್ಟಿಸುತ್ತಿದೆ’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯ ಘಟಕದ ಅಧ್ಯಕ್ಷ ದಸ್ತಗೀರ್ ಅಗಾ ಆರೋಪಿಸಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಬಿಜೆಪಿ ವೈಫಲ್ಯ ಕಂಡಿದೆ. ಇದನ್ನು ಮರೆಮಾಚಿ, ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಮಸೀದಿ ವಿವಾದ ಸೃಷ್ಟಿಸುತ್ತಿದೆ’ ಎಂದರು.
‘ಶಾಸಕ ಅಭಯ ಪಾಟೀಲ ಅವರೂ ರಾಜಕೀಯ ಲಾಭಕ್ಕಾಗಿಯೇ ಶಾಹಿ ಮಸೀದಿಗೆ ಸಂಬಂಧಿಸಿ ಆರೋಪಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ’ ಎಂದು ದೂರಿದರು.
‘ಬ್ರಾಹ್ಮಣರ ಮನೆತನದ ಹೆಸರು ಬಾಪಟ್. ಈ ಹಿಂದೆ ಬಾಪಟ್ ಗಲ್ಲಿಯಲ್ಲಿ ಉತ್ತಮ ವಾತಾವರಣವಿರಲಿಲ್ಲ. ಇದನ್ನು ಸರಿಪಡಿಸಿ ಶಾಂತಿಯುತ ವಾತಾವರಣ ನಿರ್ಮಿಸಲು ಎಲ್ಲ ಸಮುದಾಯದವರೂ ಪ್ರಯತ್ನಿಸಿದ್ದರು. ಮುಸ್ಲಿಮರು, ಬ್ರಾಹ್ಮಣರು ಭಾರತೀಯ ಶಿಲ್ಪಿಗಳಿಂದ ಶಾಹಿ ಮಸೀದಿ ಕಟ್ಟಿಸಿದ್ದರು’ ಎಂದು ತಿಳಿಸಿದರು.
Laxmi News 24×7