ಬೆಂಗಳೂರು : ರಾಜ್ಯಸಭೆಯ ಅಭ್ಯರ್ಥಿಯಾಗಿ ಜಗ್ಗೇಶ್ ಅಚ್ಚರಿ ಆಯ್ಕೆ, ವಿಧಾನಪರಿಷತ್ ಚುನಾವಣೆಯಲ್ಲಿ ” ವಂಶವಾದ” ಕ್ಕೆ ಅವಕಾಶವಿಲ್ಲ ಎಂಬ ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ಪಟ್ಟು ಸೇರಿದಂತೆ ರಾಜ್ಯ ಬಿಜೆಪಿಯ ಪ್ರಭಾ ವಲಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನಿರ್ಧಾರಗಳೇ ಈಗ ಮೇಲುಗೈ ಪಡೆದುಕೊಂಡಿದೆ.
ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜ್ಯ ಬಿಜೆಪಿ ವಲಯದಲ್ಲಿ ಒಂದು ವಿಚಾರದ ಚರ್ಚೆ ಪ್ರಾರಂಭಗೊಂಡಿತ್ತು. ಅದರಲ್ಲೂ ವಿಶೇಷವಾಗಿ ಜಗನ್ನಾಥ ಭವನದ ಸುತ್ತಮುತ್ತ ಪಿಸುಮಾತಿನಲ್ಲಿ ಕಾಲಕಳೆಯುವ ಗುಂಪಿನ ಮಧ್ಯೆ ಈ ಸಂಗತಿ ಕೆಲ ದಿನಗಳ ಕಾಲ ಹಾಟ್ ಟಾಪಿಕ್ ಆಗಿ ಚಾಲ್ತಿಯಲ್ಲಿತ್ತು. ‘ಈ ಬಾರಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದು ಸಂತೋಷ್ ಜಿ ಹಾಗೂ ಹೈಕಮಾಂಡ್ ನಡುವಿನ ವಿಶ್ವಾಸದ ಮಟ್ಟದ ಅಳತೆಗೋಲಾಗಲಿದೆ. ದಿಲ್ಲಿ ಮೂಲಗಳ ಪ್ರಕಾರ ಸಂತೋಷ್ ಜಿ ಬಗ್ಗೆ ಮೋದಿ ಹಾಗೂ ಅಮಿತ್ ಶಾ ಅವರಿಗೆ ಹಳೆಯ ವಿಶ್ವಾಸ ಉಳಿದಿಲ್ಲ. ಹೀಗಾಗಿ ಸಂತೋಷ್ ಜಿ ಅವರ ಶಿಫಾರಸ್ಸಿಗೆ ಈ ಬಾರಿ ಒಪ್ಪಿಗೆ ಸಿಗುವುದು ಅನುಮಾನ’ ಎಂಬ ವ್ಯಾಖ್ಯಾನಗಳು ಈ ಗುಂಪು ಚರ್ಚೆಯಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ವಾಸ್ತವಕ್ಕೂ, ಪಕ್ಷದ ವಲಯದಲ್ಲಿ ಸುಳಿಯುವ ಗಾಳಿ ಸುದ್ದಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂಬುದು ಈಗ ಮತ್ತೆ ಸಾಬೀತಾಗಿದೆ.