ಹಿಂದಿ ರಾಷ್ಟ್ರ ಭಾಷೆ ಎಂದು ವರಾತ ತೆಗೆದು ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರ ʼರನ್ ವೇ 34ʼ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿ ಬಿದ್ದಿದೆ.
ಸ್ವತಃ ಅಜಯ್ ದೇವಗನ್ ನಿರ್ಮಿಸಿ, ನಿರ್ದೇಶಿಸಿ, ಬಿಗ್ ಬಿ ಅಮಿತಾಭ್ ಬಚ್ಚನ್ ಜತೆ ನಟಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು.
ಆದರೆ, ಚಿತ್ರ ಬಿಡುಗಡೆಗೆ ಎರಡು ಮೂರು ದಿನಗಳಿರುವಾಗ ದೇವಗನ್ ಭಾಷೆ ವಿಚಾರದಲ್ಲಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ಶುಕ್ರವಾರ ಚಿತ್ರ ಬಿಡುಗಡೆಯಾಗಿದ್ದು, ಇದರ ಮೊದಲ ದಿನದ ಗಳಿಕೆ ಕೇವಲ 3 ಕೋಟಿ ರೂಪಾಯಿಗಳಾಗಿದೆ. ಈ ಮೂಲಕ ಚಿತ್ರವು ಜನಾಕರ್ಷಣೆಯಲ್ಲಿ ಹಿಂದೆ ಬಿದ್ದಂತಾಗಿದೆ. ಇನ್ನು ಚಿತ್ರದ ಗಳಿಕೆ ಬಗ್ಗೆ ಫೇಸ್ ಬುಕ್ ಸೇರಿದಂತೆ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ದೇವಗನ್ ಬಗ್ಗೆ ಹಿಗ್ಗಾಮುಗ್ಗ ಜಾಡಿಸಲಾರಂಭಿಸಿದ್ದಾರೆ.
ಹಿಂದಿ ಚಿತ್ರ ಮಾಡುವ ಬದಲು ಯಾವುದಾದರೂ ದಕ್ಷಿಣ ಭಾರತದ ಚಿತ್ರಗಳನ್ನು ಡಬ್ ಮಾಡಿಕೊಂಡು ಹಣ ಗಳಿಸಲಿ ಎಂದು ಕೆಲವರು ಹೀಗಳೆದಿದ್ದರೆ, ಮತ್ತೆ ಕೆಲವರು ಅಜಯ್ ದೇವಗನ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಪಾನ್ ಮಸಾಲ ವಿಚಾರ ಪ್ರಸ್ತಾಪ ಮಾಡಿ ಹಿಂದಿ ನಮ್ಮ ರಾಷ್ಟ್ರ ಭಾಷೆ, ವಿಮಲ್ ಪಾನ್ ಮಸಾಲ ನಮ್ಮ ಸ್ನ್ಯಾಕ್ಸ್ ಎಂದು ಕಿಚಾಯಿಸಿದ್ದಾರೆ.
Laxmi News 24×7