ಬೆಂಗಳೂರು: ಬೆಳಗಾವಿ ರೈಲು ನಿಲ್ದಾಣದಲ್ಲಿ ಸಿಗ್ನಲ್ ಕಾಮಗಾರಿ ನಿರ್ವಹಿಸಲು ಮೈಸೂರಿನಿಂದ ಬೆಂಗಳೂರು ಮಾರ್ಗದಲ್ಲಿ ಬೆಳಗಾವಿಗೆ ಹೋಗುವ ‘ವಿಶ್ವಮಾನವ ಎಕ್ಸ್‌ಪ್ರೆಸ್’ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಮೇ 5ರ ತನಕ ರದ್ದುಪಡಿಸಿದೆ.
ಇದು ಮೈಸೂರು-ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ಪ್ರಯಾಣಿಕರಿಗೂ ತೊಂದರೆ ಉಂಟು ಮಾಡಿದೆ.
ಬೆಳಿಗ್ಗೆ 5.50ಕ್ಕೆ ಮೈಸೂರಿನಿಂದ ಹೊರಡುತ್ತಿದ್ದ ರೈಲು, 8.40 ಬೆಂಗಳೂರಿಗೆ ಬಂದು ರಾತ್ರಿ 9.45ರ ಸುಮಾರಿಗೆ ಬೆಳಗಾವಿ ತಲುಪುತ್ತಿತ್ತು. ಮರುದಿನ ಬೆಳಿಗ್ಗೆ 5.30ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 5.40ಕ್ಕೆ ಬೆಂಗಳೂರಿಗೆ ಬರುತ್ತಿತ್ತು. ರಾತ್ರಿ 8.40ರ ಸುಮಾರಿಗೆ ಮೈಸೂರು ತಲುಪುತ್ತಿತ್ತು.
‘ಮೈಸೂರಿನಿಂದ ಬೆಂಗಳೂರಿಗೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ, ಬೆಂಗಳೂರಿನಿಂದ ಅರಸೀಕೆರೆ ಮತ್ತು ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಇತ್ತು. ಚಾಮುಂಡಿ ಎಕ್ಸ್‌ಪ್ರೆಸ್ ಮೇಲಿನ ಪ್ರಯಾಣಿಕರ ಒತ್ತಡವನ್ನೂ ಇದು ಕಡಿಮೆ ಮಾಡುತ್ತಿತ್ತು. ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸಲು ಇಡೀ 749 ಕಿಲೋ ಮೀಟರ್ ಸಂಚಾರವನ್ನೇ ರದ್ದುಪಡಿಸಿರುವುದು ಎಷ್ಟು ಸರಿ’ ಎಂಬುದು ರೈಲು ಪ್ರಯಾಣಿಕರ ಪ್ರಶ್ನೆ.
‘ರೈಲುಗಳ ಸಂಚಾರದ ನಡುವೆ ಕಾಮಗಾರಿಗಳನ್ನು ನಿರ್ವಹಿಸಲು ಆಗುವುದಿಲ್ಲ ಎಂಬುದು ಒಪ್ಪುವ ವಿಚಾರ. ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸಲು ಇಡೀ ಮಾರ್ಗದ ಸಂಚಾರ ರದ್ದುಪಡಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಮೈಸೂರಿನಿಂದ ಬೆಂಗಳೂರು ಮಾರ್ಗದಲ್ಲಿ ಅರಸೀಕೆರೆ ಅಥವಾ ಹುಬ್ಬಳ್ಳಿ ತನಕವಾದರೂ ರೈಲು ಸಂಚಾರ ಮುಂದುವರಿಸಬೇಕು’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಒತ್ತಾಯಿಸಿದರು.