ಬೆಳಗಾವಿ: ವಾಯವ್ಯ ಪದವೀಧರ ವಿಧಾನ ಪರಿಷತ್ ಕ್ಷೇತ್ರ ಹಾಗೂ ವಾಯವ್ಯ ಶಿಕ್ಷಕ ಮತಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೂರು ಜಿಲ್ಲೆಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
2 ಸ್ಥಾನಗಳಿಗೆ ನಡೆಯಲಿರುವ ಈ ಪರಿಷತ್ ಚುನಾವಣೆ ಟಿಕೆಟ್ ಅನ್ನು ಭಾರತೀಯ ಜನತಾ ಪಕ್ಷ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳಿಗೆ ನೀಡಿದರೇ, ಕಾಂಗ್ರೆಸ್ ಪಕ್ಷವೂ ಬೆಳಗಾವಿ ಜಿಲ್ಲೆಯ ಎರಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
ಅಥಣಿಯ ನ್ಯಾಯವಾದಿ ಸುನೀಲ ಅಣ್ಣಪ್ಪ ಸಂಕ ಅವರಿಗೆ ಟಿಕೆಟ್ ನೀಡಲಾಗಿದ್ದು, ವಾಯವ್ಯ ಶಿಕ್ಷಕ ಮತಕ್ಷೇತ್ರದ ಟಿಕೆಟ್‌ನ್ನು ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರಿಗೆ ಘೋಷಣೆ ಮಾಡಿದೆ.
ಕಳೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಅವರು ಸೋಲು ಅನುಭವಿಸಿದ್ದನ್ನು ಬಿಜೆಪಿ ಈಗ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೂ, ಹಾಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರ ವಿರುದ್ಧ ಕಾಂಗ್ರೆಸ್‌ನಿಂದ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರನ್ನು ಪ್ರಬಲ ಎದುರಾಳಿಯನ್ನಾಗಿ ಕಣಕ್ಕಿಳಿಸಿರುವುದರಿಂದ ಚುನಾವಣೆ ಕಣ ರಂಗೇರಲಿದೆ.
ಪ್ರಕಾಶ್ ಹುಕ್ಕೇರಿ ಅವರ ಬೆಂಬಲಿಗರ ತಂಡಗಳು, ಕಳೆದ 2-3 ತಿಂಗಳುಗಳಿಂದ ಬೆಳಗಾವಿ, ವಿಜಯಪುರ ಹಾಗೂ ಬಾಗಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯಿಂದ ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿರುವ ವಿಧಾನ ಪರಿಷತ್ತಿನ ಸದಸ್ಯ ಹಣಮಂತ ನಿರಾಣಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತರಾಗಿರುವ ಅಥಣಿ ನ್ಯಾಯವಾದಿ ಸುನೀಲ ಸಂಕ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಇವರಿಬ್ಬರ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.