ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲರದ್ದು ವ್ಯವಸ್ಥಿತ ಕೊಲೆ. ಒಂದು ಲಕ್ಷ ಕೋಟಿ ರೂ. ಟೆಂಡರ್ ಗಳಲ್ಲಿ ಅವ್ಯವಹಾರ ನಡೆದಿದೆ. ಉಡುಪಿಯಲ್ಲಿ ಏ.12ರಂದು ಸಂಭವಿಸಿದ ಗುತ್ತಿಗೆದಾರ ಸಂತೋಷ್ ಅವರ ನಿಗೂಢ ಸಾವು ಭ್ರಷ್ಟಾಚಾರಿ ವ್ಯವಸ್ಥೆ ಮಾಡಿಸಿದ ವ್ಯವಸ್ಥಿತ ಕೊಲೆಯಾಗಿದೆ ಎಂದು ಉದ್ಯಮಿ ಆಲಂ ಪಾಷಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್ ಸಾವಿಗೆ ಮೂಲ ಕಾರಣವಾದ ಭ್ರಷ್ಟಾಚಾರದ ಬಗ್ಗೆ ಒಂದಕ್ಷರವನ್ನೂ ಹೇಳದೆ ಉಡುಪಿಯ ಪೊಲೀಸರು 2022ರ ಏಪ್ರಿಲ್ 13ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಈಶ್ವರಪ್ಪ ಅವರು ತಮ್ಮ ವಿರುದ್ಧ ಎಫ್‌ಐಆರ್ ಆದ ದಿನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದೆ ಏ.15ರಂದು ರಾತ್ರಿ 8.30ಕ್ಕೆ ರಾಜೀನಾಮೆ ಕೊಟ್ಟಿದ್ಯಾಕೆ? ಈ ನಡುವೆ ಸಂತೋಷ್ ಸಾವಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿದರೆಂಬ ಗುಮಾನಿಯಿದೆ ಎಂದು ಗಂಭೀರ ಆರೋಪ ಮಾಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ 4 ಕೋಟಿ ರೂ. ಮೌಲ್ಯದ 108 ಗುತ್ತಿಗೆ ಕಾಮಗಾರಿಗಳಿಗೆ ಸಂಬಂಧಿಸಿ ಕಾರ್ಯಾದೇಶ, ಸ್ಥಳೀಯ ಶಾಸಕರು, ಪಂಚಾಯತ್, ಅಧಿಕಾರಿಗಳ ಅನುಮತಿ ಯಾವುದೂ ಇಲ್ಲದೆ ನಡೆದ ಕಾಮಗಾರಿಗಳ ಮಹಾ ಅಕ್ರಮದ ಸಾಕ್ಷ್ಯಗಳನ್ನು ನಾಶಪಡಿಸಿದ ಬಳಿಕ ಈ ಮುಹೂರ್ತದಲ್ಲಿ ರಾಜೀನಾಮೆ ನೀಡಿದ್ದಾರೆ. ಪೊಲೀಸರು ಈಶ್ವರಪ್ಪ ವಿರುದ್ಧ ಹಾಕಿರುವ ಸೆಕ್ಷನ್ ಗಳು ತೀರಾ ಬಾಲಿಶವಾಗಿದೆ. ಸಂತೋಷ್ ಮಾಡಿರುವ ಮೂಲ ಆರೋಪಗಳ ಬಗ್ಗೆ ಎಫ್‌ಐಆರ್ ನಲ್ಲಿ ಉಲ್ಲೇಖವೇ ಇಲ್ಲ. ಈಶ್ವರಪ್ಪ ರಾಜೀನಾಮೆಗೂ ಮುನ್ನ ಭಾರೀ ಪ್ರಮಾಣದ ಕಮಿಷನ್ ಅಕ್ರಮ ವ್ಯವಹಾರ ನಡೆದಿರುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತರಾತುರಿಯಲ್ಲಿ 5,500 ಕೋ ರೂ.ಗಳ ಟೆಂಡರ್ಗಳಿಗೆ ಕೇವಲ 8 ದಿನದಲ್ಲಿ ಮಂಜೂರಾತಿ ನೀಡಲಾಗಿದೆ. ಕೆಟಿಪಿಐ ಆಕ್ಟ್ ಪ್ರಕಾರ ಟೆಂಡರ್ ಪ್ರಕ್ರಿಯೆ ಕನಿಷ್ಟ 30 ದಿನಗಳವರೆಗೆ ಇರಬೇಕು. ಆದರೆ ಇಲ್ಲಿ ಏ.21ಕ್ಕೆ ಮುಗಿಯುವಂತೆ ಕೇವಲ 8 ದಿನಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿಯ 5,500 ಕೋ. ರೂ.ಗಳ ಟೆಂಡರ್ ಗಳನ್ನು ನೀಡಲಾಗಿದೆ. ನಿಯಮದಂತೆ ಟೆಂಡರ್ ಪ್ರಕ್ರಿಯೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸಿಲ್ಲ. ಅಲ್ಲದೆ 15,000 ಕೋಟಿ ರೂ.ಗಳ 62 ಕಾಮಗಾರಿಗಳಿಗೂ ಟೆಂಡರ್ ಕಮಿಟಿ ಒಪ್ಪಿಗೆ ನೀಡದಿದ್ದರೂ 6-10 ದಿನಗಳಲ್ಲಿ ಮಂಜೂರು ಮಾಡಲಾಗಿದೆ. ನಿರ್ದಿಷ್ಟ ಗುತ್ತಿಗೆದಾರರಿಗೆ ಬೇಕಾದಂತೆ ಟೆಂಡರ್ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಆಲಂ ಪಾಷಾ ಆರೋಪಿಸಿದ್ದಾರೆ.