ಕೆಜಿಎಫ್ 2′ ಸಿನಿಮಾ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಸಿನಿಮಾ ನೋಡಿದವರೆಲ್ಲ ಅದ್ಭುತ ಎಂದಿದ್ದಾರೆ. ಅಭಿಮಾನಿಗಳು ಮಾತ್ರವೇ ಅಲ್ಲದೆ, ಚಿತ್ರರಂಗದ ಗಣ್ಯರು, ಸಿನಿಮಾ ವಿಧ್ಯಾರ್ಥಿಗಳು ಕೆಲವು ರಾಜಕಾರಣಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಆದರೆ ಬೆಂಗಳೂರಿನ ಮಾಜಿ ಕಮೀಷನರ್ ಭಾಸ್ಕರ್ ರಾವ್ ‘ಕೆಜಿಎಫ್ 2’ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಭಾಸ್ಕರ್ ರಾವ್, ‘ಕೆಜಿಎಫ್ 2’ ಸೇರಿದಂತೆ ರೌಡಿಸಂ ಸಿನಿಮಾಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ 2′ ಸಿನಿಮಾದಲ್ಲಿ ಕ್ರಿಮಿನಲ್ ಒಬ್ಬ ನಾಯಕನಾಗಿದ್ದಾನೆ ಎಂಬ ಬಗ್ಗೆ ಮಾತನಾಡಿರುವ ಭಾಸ್ಕರ್ ರಾವ್, ”ನಾನು ಆ ಸಿನಿಮಾವನ್ನು ಒಪ್ಪುವುದಿಲ್ಲ. ಜನರಿಗೆ ಏನು ಸಂದೇಶ ಕೊಡಬೇಕೆಂದು ಹೊರಟಿದ್ದೀರಿ ನೀವು. ರೌಡಿಸಂ ಲಾಭದಾಯಕ ದಂಧೆ ಎಂದು ತೋರಿಸಬೇಕು ಎಂದುಕೊಂಡಿದ್ದೀರ?” ಎಂದು ಭಾಸ್ಕರ್ ರಾವ್ ಪ್ರಶ್ನೆ ಮಾಡಿದ್ದಾರೆ.
”ನಾನು ಬೆಂಗಳೂರು ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕೆಲಸ ಮಾಡುತ್ತಿದ್ದಾಗ ದಂಡುಪಾಳ್ಯ ಬಾಚಿನವರ ಹಾವಳಿ ಜಾಸ್ತಿ ಇತ್ತು. ನಂತರ ಬೆಂಗಳೂರು ರೇಂಜ್ ಐಜಿ ಆಗಿರುವಾಗ ಯಾರೊ ‘ದಂಡುಪಾಳ್ಯ’ ಸಿನಿಮಾ ಮಾಡಿ ಅದನ್ನು ನೋಡಲು ಆಹ್ವಾನಿಸಿದ್ದರು. ನಾನು ತಂಡವನ್ನು ಕರೆದುಕೊಂಡು ಹೋಗಿದ್ದೆ. ಸಿನಿಮಾ ನೋಡುವಾಗಲೆ ದೊಡ್ಡಬಳ್ಳಾಪುರದಲ್ಲಿ ಯಾರೊ ಇಬ್ಬರು ‘ದಂಡುಪಾಳ್ಯ’ ಸಿನಿಮಾದಲ್ಲಿ ಕೊಲೆ ಮಾಡುವ ರೀತಿಯಲ್ಲಿಯೇ ಕೊಲೆ ಮಾಡಿದ್ದಾರೆ ಎಂದರು” ಎಂದು ನೆನಪು ಮಾಡಿಕೊಂಡರು ಭಾಸ್ಕರ್ ರಾವ್.