ಮೈಸೂರು: ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ. ರಾಜಕಾರಣದಲ್ಲಿ ಯಾರು ಸತ್ಯವಂತರು? ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಶ್ನಿಸಿದ್ದಾರೆ. ಇಂದು ‘ಜೆಡಿಎಸ್ ಜನತಾ ಜಲಧಾರೆ’ ಕಾರ್ಯಕ್ರಮ ಉದ್ಘಾಟನೆಗೆ ಹೆಚ್.ಡಿ ಕೋಟೆಯ ಬೀಚನಹಳ್ಳಿಗೆ ಆಗಮಿಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಪರ್ಸೆಂಟೇಜ್ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್ನವರು ಏನು ಮಾಡಿಯೇ ಇಲ್ಲವೇ?, ಯಾರು ಸಾಚ ಇದ್ದಾರೆ ಹೇಳಿ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಶೇ.10 ಸರ್ಕಾರ ಎಂದು ಪ್ರಧಾನಿಯವರೇ ಆರೋಪ ಮಾಡಿದ್ದರು. ಆಗ ನಾನು ಯಾವುದೇ ಆರೋಪ ಮಾಡಿರಲಿಲ್ಲ. ಈಗಲೂ ಅಷ್ಟೇ. ಪರ್ಸೆಂಟೇಜ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಗುತ್ತಿಗೆದಾರರ ಸಂಘದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೂ ನನಗೂ ಸಂಬಂಧವಿಲ್ಲ. ನನ್ನ ಮಗ ನೀರಾವರಿ ಸಚಿವ ಅಥವಾ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದರೇ ನಾನು ಮಾತನಾಡುತ್ತಿದ್ದೆ. ಈಗ ಆರೋಪಕ್ಕೂ ನನಗೂ ಸಂಬಂಧವಿಲ್ಲ. ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು ಎಂದರು.
ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರದಲ್ಲಿ ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮ ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ. ನಮ್ಮ ಜೊತೆ ಇಲ್ಲಿಗೆ ಯಾರಾದರೂ ಬಂದಿದ್ದಾರೆ?, ಸುಮ್ಮನೆ ಯಾರೋ ಏನೇನೋ ಹೇಳುತ್ತಾರೆ, ಹೇಳಲಿ ಬಿಡಿ ಎಂದರು.