ಗದಗ, ಏಪ್ರಿಲ್ 16: ಕಾಂಗ್ರೆಸ್‌ನವರು ತಾವೇ ಶುದ್ಧಹಸ್ತರು ಎನ್ನುವಂತೆ ವರ್ತಿಸುತ್ತಿದ್ದಾರೆ, ಸ್ವಲ್ಪ ದಿನದಲ್ಲಿ ಅವರಿಗೆ ಸತ್ಯವನ್ನು ಎದುರಿಸುವ ಕಾಲ ಸನ್ನಿಹಿತವಾಗಲಿದೆ. ಆ ಸತ್ಯ ಎದುರಿಸುವ ಶಕ್ತಿಯನ್ನು ಕಾಂಗ್ರೆಸ್‌ನವರು ಪಡೆದುಕೊಳ್ಳಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ತಿರುಗೇಟು ನೀಡಿದರು.
ಗದಗ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ಲೂಟಿ ನಡೆದಿದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ. ಕಾಂಗ್ರೆಸ್ ಸಾಮಾಜಿಕವಾಗಿ ಒಡೆದು ಆಳುವುದು ಹಾಗೂ ತುಷ್ಟೀಕರಣ ನೀತಿ ಪ್ರಾರಂಭಿಸಿತು. ಭ್ರಷ್ಟಾಚಾರ ಪರಂಪರೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು.
ಬಿಜೆಪಿ ಪಕ್ಷಕ್ಕೆ ಮುಜುಗರವಾಗಬಾರದೆಂದು ಕೆ.ಎಸ್. ಈಶ್ವರಪ್ಪ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಶೀಘ್ರ ಆರೋಪಮುಕ್ತರಾಗುವ ವಿಶ್ವಾಸವಿದೆ. ಅವರ ಬಂಧನಕ್ಕೆ ಆಗ್ರಹ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿದರು.
ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಇಂದು ಹತಾಶರಾಗಿ ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಶುಭ್ರರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಗಮನಿಸಿದಂತೆ ರಾಜ್ಯದ ವಿರೋಧ ಪಕ್ಷದಲ್ಲಿ ಇಂದು ತೊಳಲಾಟ ಪ್ರಾರಂಭವಾಗಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್‌ನವರು ನಾಟಕ ಪ್ರಾರಂಭ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.