ಬೆಳಗಾವಿ: ನಗರದ ವಡಗಾವಿಯ ನಾಲ್ಕು ಎಕರೆ ಜಾಗದಲ್ಲಿ 130 ಕೋಟಿ ವೆಚ್ಚದಲ್ಲಿ ಕಿದ್ಚಾಯಿ ಕ್ಯಾನ್ಸರ್ ಸಂಸ್ಥೆ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು, ಶಿವಮೊಗ್ಗ, ಮೈಸೂರಿನಲ್ಲಿ ಕೇಂದ್ರ ಆರಂಭಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರ ಮುತುವರ್ಜಿಯಿಂದ ಮುಖ್ಯಮಂತ್ರಿಯವರು ಬೆಳಗಾವಿಗೆ ಕ್ಯಾನ್ಸರ್ ಸಂಸ್ಥೆ ಮಂಜೂರು ಮಾಡಲಾಗಿರುತ್ತದೆ. ಮುಂದಿನ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಸುಸಜ್ಜಿತ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಬೆಳಗಾವಿಯಲ್ಲಿ ಸದ್ಯಕ್ಕೆ ನೂರು ಹಾಸಿಗೆ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸಾಮಥ್ರ್ಯವನ್ನು ಹೆಚ್ಚಿಸಲಾಗುವುದು. ಕಿದ್ವಾಯಿ ಕ್ಯಾನ್ಸರ್ ಕೇಂದ್ರದ ಮಾದರಿಯಲ್ಲಿ ಪ್ರತಿಯೊಂದು ಚಿಕಿತ್ಸೆ ಇಲ್ಲಿ ಲಭ್ಯವಾಗಲಿದೆ. ಎಲ್ಲ ಬಗೆಯ ವಿಭಾಗಗಳನ್ನು ಆರಂಭಿಸಲಾಗುವುದು. ಇದಲ್ಲದೇ ಸಂಶೋಧನಾ ಕೇಂದ್ರ ಕೂಡ ಆರಂಭಿಸುವ ಬಗ್ಗೆ ಚಿಂತನೆಯಿದೆ. ಮುಂಬರುವ ದಿನಗಳಲ್ಲಿ ಆಸ್ಪತ್ರೆ ವಿಸ್ತರಣೆಗೆ ಅನುಕೂಲವಾಗುವಂತೆ ಜಾಗವನ್ನು ಗುರುತಿಸಲಾಗಿದೆ. ಕ್ಯಾನ್ಸರ್ ರೋಗ ದಿನೇ ದಿನೇ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಈ ಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಆದ್ದರಿಂದ ಸುಸಜ್ಕಿತ ಮೊಬೈಲ್ ಘಟಕದ ಮೂಲಕ ಕ್ಯಾನ್ಸರ್ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.