ಕುಣಿಗಲ್: ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜತೆ ಯುವತಿಯೇ ಇಷ್ಟಪಟ್ಟು ಸರಳವಾಗಿ ಮದುವೆ ಆಗಿದ್ದರು. ಈ ಜೋಡಿಯ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು ಕೂಡ. ‘ಒಲವಿನ ಬದುಕಿಗೆ ಪ್ರೀತಿಯೊಂದಿದ್ದರೆ ಸಾಕು ಬೇರೇನೂ ಬೇಡ.
ಶುಭವಾಗಲಿ’ ಎಂದು ನೂರಾರು ಜನ ಹರಸಿದ್ದರು ಕೂಡ. ಆದರೀಗ ಈ ಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಯುವತಿ ಜತೆ ಸಪ್ತಪದಿ ತುಳಿದಿದ್ದ ರೈತ ಶಂಕರಪ್ಪ ಇಂದು (ಮಂಗಳವಾರ) ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಪ್ಪ(45) ಮೃತರು. ಗ್ರಾಮದ ಹೊಲವೊಂದರಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಶವದ ಬಳಿ ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ. 2021ರ ಅಕ್ಟೋಬರ್ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಮತ್ತು ಅಕ್ಕಿಮರಿಪಾಳ್ಯದ ಶಂಕರಪ್ಪ ಅವರ ಮದುವೆ ನಡೆದಿತ್ತು.
45 ವರ್ಷ ವಯಸ್ಸಾದರೂ ಶಂಕರಪ್ಪಗೆ ಮದುವೆ ಆಗಿರಲಿಲ್ಲ. ಅವರ ಬಳಿ ಮೇಘನಾ ಅವರೇ ಹೋಗಿ ತನ್ನನ್ನು ಮದುವೆ ಆಗುವಂತೆ ಪ್ರಸ್ತಾಪ ಇಟ್ಟಿದ್ದರು. ಇದಕ್ಕೆ ಒಪ್ಪಿದ್ದ ಶಂಕರಣ್ಣ ಗ್ರಾಮ ಸಮೀಪದ ದೇವಾಲಯದಲ್ಲಿ 2021ರ ಅಕ್ಟೋಬರ್ 2ನೇ ವಾರದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮೇಘನಾಗೆ ಈ ಹಿಂದೆ ಬೇರೊಬ್ಬನ ಜತೆಲ ಮದುವೆ ಆಗಿತ್ತಂತೆ. ಆದರೆ, ಕಳೆದ 2 ವರ್ಷದಿಂದ ಪತಿ ಕಾಣೆಯಾಗಿದ್ದು, ಪತ್ನಿಯನ್ನು ನೋಡಲೂ ಬಂದಿರಲಿಲ್ಲವಂತೆ. ಇದೇ ಕಾರಣಕ್ಕೆ ಬೇಸತ್ತ ಮೇಘನಾ, ಶಂಕರಣ್ಣ ಅವರ ಬಳಿ ತನ್ನನ್ನು ಮದುವೆ ಆಗ್ತೀರಾ ಎಂದು ಕೇಳಿದ್ದಳು. ಇದಕ್ಕೆ ಒಪ್ಪಿದ್ದ ಶಂಕರಪ್ಪ ಮದುವೆ ಆಗಿದ್ದರು.
25 ವರ್ಷದ ಯುವತಿ 45 ವರ್ಷದ ರೈತರೊಬ್ಬರನ್ನ ಮದುವೆ ಆಗಿದ್ದ ಸುದ್ದಿ ಕೇಳಿ ಬಹುತೇಕರು ಶುಭಕೋರಿ ಹರಸಿದ್ದರು. ಆದರಿಂದು ಬೆಳಗ್ಗೆ ಈ ಜೋಡಿ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ. ಇಂದು ಬೆಳಗ್ಗೆ ಮನೆಯಿಂದ ಹೊಲದ ಕಡೆ ಹೋಗೋದಾಗಿ ಹೇಳಿ ಹೋಗಿದ್ದ ಶಂಕರಪ್ಪ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಹುಲಿಯೂರುದುರ್ಗ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.