ಬೆಳಗಾವಿ ಮಹನಗರ ಪಾಲಿಕೆಯ 2022-23ನೇ ಸಾಲಿನ ಬಜೆಟ್‍ನ್ನು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಮಂಡಿಸಿದರು. 2022-23ನೇ ಸಾಲಿನಲ್ಲಿ 44,765.22 ಲಕ್ಷಗಳಷ್ಟು ಅಂದಾಜು ಆದಾಯವನ್ನು ನಿರೀಕ್ಷಿಸಲಾಗಿದ್ದು, 44,758.91 ಲಕ್ಷಗಳಷ್ಟು ಅಂದಾಜು ವೆಚ್ಚವನ್ನು ನಿರೀಕ್ಷೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಪಾಲಿಕೆ ಬಜೆಟ್‍ನ್ನು ಮಂಡಿಸಿದ ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ, ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಬೀದಿ ದೀಪಗಳ ನಿರ್ವಹಣೆಗೆ 550ಲಕ್ಷ ರೂಪಾಯಿಗಳನ್ನು ವ್ಯಯ ಮಾಡಲು ನಿರ್ಧರಿಸಲಾಗಿದೆ. ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ ಎಲ್‍ಇಡಿ ಲೈಟ್ ಹಾಕಲು ಯೋಜಿಸದಲಾಗಿದೆ. ರಸ್ತೆ, ಒಳಚರಂಡಿ, ಮಾರ್ಗಸೂಚಿಗಳನ್ನು ಅಳವಡಿಸಲು 550ಲಕ್ಷ ರೂಪಾಯಿ, ತುರ್ತು ಸಂದರ್ಭಗಳಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಇಡೇರಿಕೆಗಾಗಿ 550 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣಾಭಿವೃದ್ಧಿಗಾಗಿ 509 ಲಕ್ಷಗಳನ್ನು ನಿಗದಿಗೊಳಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗೆ 116.81 ಲಕ್ಷ ರೂಪಾಯಿಗಳನ್ನು ಮೀಸಲಿರಿಸಿದೆ. ಇನ್ನುಳಿದಂತೆ ಉದ್ಯಮಬಾಗ್ ಕೂಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ 200ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ನಗರದಲ್ಲಿ ಪ್ರಮುಖ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆಗೆ 100ಲಕ್ಷ ರೂಪಾಯಿಗಳನ್ನು, ಬೀದಿ ನಾಯಿಗಳ ನಿರ್ವಹಣೆಗಾಗಿ 60ಲಕ್ಷ ರೂ, ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 50ಲಕ್ಷ ರೂ, ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 30ಲಕ್ಷ ರೂ, ವಿವಿಧ ಸ್ಮಶಾನ ಕೇಂದ್ರಗಳ ಅಭಿವೃದ್ಧಿ ಹಾಗೂ ಪರಿಸರ ಸ್ನೇಹೀ ದಹನ ಕ್ರಿಯೆ ನಡೆಸಲು 50ಲಕ್ಷ ರೂಪಾಯಿಗಳು ಸೇರಿದಂತೆ, ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಪಾಲಿಕೆ ಆದಾಯದ ಶೇ 1ರಷ್ಟನ್ನು ಕ್ರೀಡೆಗಾಗಿ ಮೀಸಲಿರಿಸುವುದು ಸೇರಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದರು.