ಬೆಂಗಳೂರು: ಮೇಕೆದಾಟು ವಿಷಯದಲ್ಲಿ ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ. ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದ ವಿಷಯದಲ್ಲಿ ನಾವೆಲ್ಲ ಒಂದೇ ಎಂದು ನೆರೆ ರಾಜ್ಯಕ್ಕೆ ಸಂದೇಶ ಕಳುಹಿಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖ್ಯ ನಾಯಕರು ಮಾತಿನ ಚಾಟಿ ಬೀಸಿ ವಿಧಾನಸಭೆಯಿಂದಲೇ ತಮಿಳುನಾಡಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯ ವೇಳೆಯಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯದ ವಿಷಯ ಪ್ರಸ್ತಾಪವಾಯಿತು. ಈ ವೇಳೆ, ತಮಿಳುನಾಡಿನ ಗದಾ ಪ್ರಹಾರ ಸಹಿಸಲ್ಲ, ಮೇಕೆದಾಟು ಯೋಜನೆ ಅನುಷ್ಠಾನ ಮಾಡಿಯೇ ತೀರುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಪಥ ಮಾಡಿದರೆ, ನಮ್ಮ ಯೋಜನೆ ಬಗ್ಗೆ ನಿರ್ಣಯ ಮಾಡಲು ಅವರಿಗೆ ಹಕ್ಕೇ ಇಲ್ಲವೆಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ದನಿಗೂಡಿಸಿ, ತಮಿಳುನಾಡು ವಿನಾಕಾರಣ ಕ್ಯಾತೆ ತೆಗೆಯುತ್ತ ಯೋಜನೆಗೆ ಅಡ್ಡಿ ಮಾಡುತ್ತಾ ವಿಷಯ ಜೀವಂತವಿಡಲು ಪ್ರಯತ್ನ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ತಮಿಳುನಾಡು ನಿರ್ಣಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೂರು ಪಕ್ಷದ ಪ್ರಮುಖ ನಾಯಕರು, ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಖಂಡನಾ ನಿರ್ಣಯ ಕೈಗೊಂಡು ಪ್ರತಿರೋಧ ವ್ಯಕ್ತಪಡಿಸಲು ಒಕ್ಕೊರಲ ನಿಲುವಿಗೆ ಬಂದರು. ಬುಧವಾರ ಕಲಾಪದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಎಚ್.ಕೆ.ಪಾಟೀಲ್ ಅವರಿಂದ ಚರ್ಚೆ ಆರಂಭವಾಯಿತು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಒಂದು ಸಹಜ ವರ್ಷದಲ್ಲಿ 177.25 ಟಿಎಂಸಿ ನೀರನ್ನು ಬಿಳಿಗೊಂಡ್ಲುವಿನಿಂದ ತಮಿಳುನಾಡಿಗೆ ಬಿಡಬೇಕು ಎಂದು ನ್ಯಾಯಾಲಯದ ತೀರ್ಪು ಹೇಳಿದೆ. ಇದರ ಅನುಷ್ಠಾನಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಈ ನೀರನ್ನು ಪಡೆದುಕೊಳ್ಳುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಕೋರ್ಟ್ ತೀರ್ಪಿನ ನಂತರ ಈವರೆಗೆ ತಮಿಳುನಾಡಿಗೆ ಸುಮಾರು 582 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ಅಷ್ಟೇ ಅಲ್ಲದೆ ನಮ್ಮನ್ನು ಅಥವಾ ಕೇಂದ್ರ ಸರ್ಕಾರವನ್ನು ಕೇಳದೆ ತಮಗೆ ಬೇಕಾದ ಯೋಜನೆ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.