ಬೆಂಗಳೂರು: ರಾಜ್ಯದಲ್ಲಿ ಬಿ.ಝಡ್. ಜಮೀರ್ ಅಹಮದ್ ಖಾನ್ ಸೇರಿ 6 ಮಾಜಿ ಸಚಿವರು ಸರ್ಕಾರದಿಂದ ನೀಡಲಾಗಿದ್ದ ವಸತಿ ಗೃಹಗಳ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತುಗಳನ್ನು ಮೂರು ವರ್ಷವಾದರೂ ಪಾವತಿಸಿಲ್ಲ.
ರಾಜ್ಯದಲ್ಲಿ ಸಚಿವರಾದವರಿಗೆ ಸರ್ಕಾರದಿಂದ ಆಡಳಿತ ಕಾರ್ಯವೈಖರಿಗೆ ಅನುಕೂಲ ಆಗುವಂತೆ ವಸತಿ ಗೃಹ ನೀಡಲಾಗುತ್ತದೆ.
ಕೆಲವರು ಅಧಿಕಾರ ಪೂರ್ಣಗೊಂಡರೂ ವಸತಿ ಮನೆ ಬಿಟ್ಟು ಹೋಗದೇ ಇದ್ದಲ್ಲಿ, ಎಷ್ಟು ದಿನಗಳವರೆಗೆ ಉಳಿದುಕೊಂಡಿರುತ್ತಾರೋ ಅಷ್ಟು ಅವಧಿಗೆ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತು ಪಾವತಿಸಬೇಕು.
ಆದರೆ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ 188 ದಿನಗಳ ಬಾಬ್ತು 38.27 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಆರ್.ಬಿ. ತಿಮ್ಮಾಪುರ ಅವರು 3.77 ಲಕ್ಷ ರೂ. ಮೊತ್ತದ ಸಾಮಗ್ರಿಗಳನ್ನು ಹಿಂದುರಿಗಿಸಿಲ್ಲ. ಮತ್ತೊಂದೆಡೆ ಸಿ.ಎಸ್. ಪುಟ್ಟರಾಜು 1.09 ಲಕ್ಷ ರೂ, ವೆಂಕಟರಮಣಪ್ಪ 59 ಸಾವಿರ ರೂ,. ವೆಂಕಟರಾವ್ ನಾಡಗೌಡ 87 ಸಾವಿರ ರೂ. ಮೊತ್ತದ ಗೃಹೋಪಯೋಗಿ ವಸ್ತುಗಳ ಬಾಬ್ತುಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರಿಗೆ ಈ ವರೆಗೆ ವಸತಿಗೃಹ ಹಂಚಿಕೆಯಾಗಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಬಹಿರಂಗವಾಗಿದೆ.