ಹೊಳೆನರಸೀಪುರ: ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಭಾನುವಾರ ಬೆಳಿಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನೂರಾರು ಭಕ್ತರು ಮಹಾಶಿವರಾತ್ರಿ ನಿಮಿತ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದರು.
‘ಪಾದಯಾತ್ರೆಯಿಂದ ನಮ್ಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು.
ಜೊತೆಗೆ ದೇವರ ಮೇಲಿನ ನಂಬಿಕೆ ಹೆಚ್ಚುತ್ತದೆ. ನಂಬಿಕೆಯಿಂದ ಮಾಡುವ ಕೆಲಸ ಸದಾ ಯಶಸ್ಸನ್ನು ತಂದು ಕೊಡುತ್ತದೆ. ನಾನು ನಂಬಿಕೆಯಿಂದ ಎಲ್ಲ ಜನರಿಗೆ ಉತ್ತಮ ಜೀವನ ಸಿಗಲಿಎನ್ನುವ ಉದ್ದೇಶದಿಂದ ಧರ್ಮಸ್ಥಳ ಪಾದಯಾತ್ರೆ ಹೊರಟಿದ್ದೇನೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
‘ಕ್ಷೇತ್ರದ ಯುವಕರು ಪಾದಯಾತ್ರೆ ಮೂಲಕ ಮಂಜುನಾಥಸ್ವಾಮಿಯ ದರ್ಶನ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಪಾದಯಾತ್ರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ 1,850ಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಸಿ ನನ್ನೊಂದಿಗೆ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದರು.
‘ಪಾದಯಾತ್ರಿಗಳ ಕ್ಷೇಮದ ದೃಷ್ಟಿಯಿಂದ ಮಾರ್ಗದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ದಿನಕ್ಕೆ 50 ಕಿ.ಮೀ. ನಡೆದು ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸುತ್ತೇವೆ’ ಎಂದರು.