ಉಡುಪಿ: ಗ್ರಾಮ ವಾಸ್ತವ್ಯದಲ್ಲಿ (Village Stay) ಹೊಸ ಅನುಭವ, ಹೊಸ ವಿಚಾರ ಸಿಕ್ಕಿದೆ. ಅಸ್ಪೃಷ್ಯತೆ ಹೇಗಿರುತ್ತದೆ ಎಂಬ ಅನುಭವ ನನಗೆ ಆಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ನುಡಿದಿದ್ದಾರೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜೂರಿನಲ್ಲಿ ಗ್ರಾಮ ವಾಸ್ತವ್ಯದ ನಂತರ ಅವರು ಮಾತನಾಡಿದರು. ಮುಖ್ಯ ವಾಹಿನಿಗೆ ಬಾರದ ನೂರಾರು ಜನಾಂಗಗಳಿವೆ. ಕಣ್ಣೆದುರು ಸಮಸ್ಯೆ ಇದ್ದರೂ ಕಣ್ಮುಚ್ಚಿಕೊಂಡು ಓಡಾಡುತ್ತಿದ್ದೇವೆ. ಜೀವನದಲ್ಲಿ ನೋಡದೆ ಇರುವ ಸತ್ಯಸಂಗತಿಗಳು ಅರಿವಾಗಿವೆ ಎಂದು ಆರ್.ಅಶೋಕ್ ಅನುಭವ ಹಂಚಿಕೊಂಡಿದ್ದಾರೆ. ಹಿಂದುಳಿದ ಜಿಲ್ಲೆ ಯಾದಗಿರಿಗೆ ಮುಂದಿನ ಭೇಟಿ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಕುಡುಬಿ ಸಮುದಾಯದ ಪ್ರಗತಿಯ ಕುರಿತು ಮಾತನಾಡಿದ ಸಚಿವರು, ಕುಡುಬಿ ಸಮುದಾಯಕ್ಕೆ 50 ಎಕರೆ ಜಮೀನು ಮೀಸಲಿಡುವುದಾಗಿ ಘೋಷಿಸಿದ್ದಾರೆ. ಜತೆಗೆ ಕೊರಗ ಸಮುದಾಯದ ಯುವಕನಿಗೆ ಗ್ರಾಮ ಸಹಾಯಕ ಹುದ್ದೆಯನ್ನು ನೀಡಲಾಗುವುದು. ಯಾವ ಸಮಾಜವನ್ನು ದೂರ ಇಡಲಾಗಿತ್ತೋ, ಅದೇ ಸಮುದಾಯದ ಯುವಕ ನಾಳೆಯಿಂದ ಗ್ರಾಮದಲ್ಲಿ ಗ್ರಾಮ ಸಹಾಯಕ ಎಂದು ಆರ್.ಅಶೋಕ್ ಹೇಳಿದ್ದಾರೆ.
ಹಿಜಾಬ್ ವಿವಾದದ ಹಿಂದೆ ಐಸಿಸ್ ಸಂಘಟನೆ ಕೆಲಸ ಮಾಡುತ್ತಿದೆ’’ ಎಂದು ಆರೋಪಿಸಿರುವ ಅಶೋಕ್, ‘‘ಒಂದು ಸಂಸ್ಥೆಯ ಹಿಜಾಬ್ ವಿಚಾರ ಪ್ರಪಂಚಕ್ಕೆ ಹಬ್ಬಿದ್ದು ಹೇಗೆ? ಆರು ವಿದ್ಯಾರ್ಥಿಗಳೇ ಇಷ್ಟೆಲ್ಲಾ ಮಾಡುವುದಕ್ಕೆ ಸಾಧ್ಯವೇ? ಕೆಲವರು ಟಿಸಿ ಕೇಳ್ತಿದ್ದಾರೆ, ಕೆಲವರು ಶಾಲೆಗೆ ಬರಲ್ಲ ಎನ್ನುತ್ತಿದ್ದಾರೆ. ವಿದ್ಯೆ ಮುಖ್ಯ, ಧರ್ಮ ಮುಖ್ಯ ಅಲ್ಲ ಎಂದು ವಿನಂತಿಸುವೆ. ವಿದ್ಯೆ ಇದ್ದರೆ ಧರ್ಮ. ದೇಶ ದೊಡ್ಡದು, ಧರ್ಮ ದೊಡ್ಡದಲ್ಲ ಅರ್ಥ ಮಾಡಿಕೊಳ್ಳಿ’’ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಲುವಿನ ಕುರಿತು ವಾಗ್ದಾಳಿ ನಡೆಸಿರುವ ಆರ್.ಅಶೋಕ್, ಕಾಂಗ್ರೆಸ್ಅನ್ನು ನಂಬಿಕೊಂಡು ಹೋದರೆ ದೇವರೇ ಗತಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಡಕು ಬೀದಿಯಲ್ಲಿದೆ. ವಿಧಾನಸಭೆಯಲ್ಲಿ ಹಿಜಾಬ್ ವಿವಾದ ಚರ್ಚೆಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನ ಬಂಡವಾಳ ಏನೆಂಬುದು ಜನಕ್ಕೆ ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ.