ಆನೇಕಲ್ : ಕಟ್ಟಿಕೊಂಡ ಸಂಸಾರವನ್ನು ತ್ಯಜಿಸಿ ಗಂಡನಿಲ್ಲದ ಮಹಿಳೆಯ ಸಹವಾಸ ಮಾಡಿ, ಕುಡಿದ ಮತ್ತಿನಲ್ಲಿ ಆಕೆಯ ಮಗಳನ್ನು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು, ಮತ್ತು ಅವನಿಗೆ ಸಹಕಾರ ನೀಡಿದ್ದ ಬಾಲಕಿಯ ತಾಯಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮೆಹೆಂದಿಪುರ ಮೂಲದ ಮೋಹನ್ ಆಸ್ದಾ ಚೋಟಾ (47), ಹಾಗೂ ತಿಮಲ್ಲಿ ಮೂಲದ ಸೊಂಬರಿ ಮುರುಮು ( 46 ) ಬಂಧಿತ ಆರೋಪಿಗಳು. ಇವರು ಎರಡು ವರ್ಷಗಳ ನಂತರ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಕಳೆದ ಆರು ವರ್ಷಗಳಿಂದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಬಳ್ಖೂರಿನಲ್ಲಿ ಮುರುಮು ತನ್ನ 16 ವರ್ಷದ ಮಗಳೊಂದಿಗೆ ವಾಸವಿದ್ದಳು.
ಮುರುಮು ಗಂಡ ಸಾವನ್ನಪ್ಪಿದ್ದ. ಮೋಹನ್ ತನ್ನ ಅನೂನ್ಯ ಕುಟುಂಬವನ್ನು ಬಿಟ್ಟು ಮುರುಮುವಿನ ಸಂಗ ಬೆಳೆಸಿದ್ದ. ಚಿಕ್ಕ ಬಾಡಿಗೆ ಮನೆಯ ಕೊಠಡಿಯಲ್ಲಿ ಮೂವರು ವಾಸವಿದ್ದರು. ಮುರುಮು ಮತ್ತು ಮೋಹನ್ಗೆ ವಿಪರೀತ ಕುಡಿತದ ಚಟವಿತ್ತು. ಒಂದು ದಿನ ಮುರುಮು ಕುಡಿದ ಮತ್ತಿನಲ್ಲಿ ಮಲಗಿರುವ ಸಂದರ್ಭದಲ್ಲಿ, ಮೋಹನ್ ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಇದನ್ನು ಹುಡುಗಿ ತನ್ನ ತಾಯಿ ಬಳಿ ಹೇಳಿದ್ದಳು. ಆದರೆ ತಾಯಿ ಮೋಹನ್ಗೆ ಸಹಕರಿಸಿದ್ದಳು.
ಅನಂತರ ಹುಡುಗಿ ಏಳು ತಿಂಗಳ ಗರ್ಭಿಣಿಯಾಗಿ ವಿಷಯ ಹೊರಬೀಳುತ್ತಿದ್ದಂತೆ, ಪಶ್ಚಿಮ ಬಂಗಾಳದ ಹುಡುಗ ಬೋದಿನಾತ್ ನಂಬಿಸಿ ದ್ರೋಹ ಮಾಡಿದ್ದಾನೆ ಎಂದು 2020ರಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಗೆ ಸುಳ್ಳು ಹೇಳಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.
ಅನಂತರ ಸಂತ್ರಸ್ಥೆಯ ಮರು ಹೇಳಿಕೆ ವೇಳೆ ನಡೆದ ನಿಜ ವಿಚಾರ ಅತ್ತಿಬೆಲೆ ಪೊಲೀಸರಿಗೆ ತಿಳಿದಿದೆ. ಸಾಕು ತಂದೆ ಅತ್ಯಾಚಾರವೆಸಗಿದ್ದು, ಇದಕ್ಕೆ ನನ್ನ ತಾಯಿ ಸಹಕಾರ ನೀಡಿದ್ದಳು ಎಂದು ಬಾಲಕಿ ಹೇಳಿಕೆ ನೀಡಿದ್ದಳು. ಬಾಲಕಿ ಹೇಳಿಕೆ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿಯ ತಾಯಿ ಮತ್ತು ಆತನ ಪ್ರೀಯಕರನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.