ಬೆಂಗಳೂರು:. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧದ ಜಾತಿ ನಿಂದನೆ ಕೇಸ್ ಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಸವರಾಜ ಹೊರಟ್ಟಿ ಅವರ ಅರ್ಜಿಯನ್ನು ಆಲಿಸಿದ ನ್ಯಾ.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ಬಸವರಾಜ ಹೊರಟ್ಟಿ ಅವರಿಗೆ ಸೀಮಿತವಾಗಿ ತಡೆಯಾಜ್ಞೆ ಆದೇಶ ಜಾರಿಗೊಳಿಸಿತು.
ಅರ್ಜಿದಾರರ ಪರ ವಕೀಲರು, ಅಂದು ಘಟನಾ ಸ್ಥಳದಲ್ಲಿ ಬಸವರಾಜ ಹೊರಟ್ಟಿ ಅವರು ಇಲ್ಲದಿದ್ದರೂ ಸಹ ಅವರ ಮೇಲೆ ದೂರು ನೀಡಲಾಗಿದೆ. ಆ ದೂರಿನಲ್ಲಿ ಯಾವುದೇ ಹುರುಳಿಲ್ಲ, ಹಾಗಾಗಿ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಕೋರಿದರು. ಆ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿತು, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಕಳೆದ ಜನವರಿ 27ರಂದು ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಮತ್ತು ಇತರ ಐವರ ವಿರುದ್ಧ ದೂರು ಸಲ್ಲಿಸಿದ್ದರು. ಬಸವರಾಜ ಹೊರಟ್ಟಿ ಅವರು ಸರ್ವೋದಯ ಟ್ರಸ್ಟ್ ನ ಅಧ್ಯಕ್ಷರಲ್ಲದಿದ್ದರೂ ವಿಧಾನಪರಿಷತ್ ಸಭಾಪತಿಯಾಗಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ವೋದಯ ಟ್ರಸ್ಟ್ ಅನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಮಹಾಸಭಾದ ಸದಸ್ಯರು ಧಾರವಾಡದ ಶಾಲೆಗೆ ಭೇಟಿ ನೀಡಿದಾಗ ಹೊರಟ್ಟಿ ಅವರ ಬೆಂಬಲಿಗರು ಜಾತಿನಿಂದನೆ ನಡೆಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದರು. ಮಹಾಸಭಾ ಈ ಕುರಿತು ಎಸ್ ಸಿ/ಎಸ್ ಟಿ ದೌರ್ಜನ್ಯ ಕಾಯ್ದೆ ಅಡಿ ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಕೋರಿದ್ದರು. ಆ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮಾಂತರ ಪೊಲೀಸರು ಬಸವರಾಜ ಹೊರಟ್ಟಿ ಮತ್ತು ಇತರ ಐದು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.