ಮನೆ ಕಳ್ಳತನ, ಬೈಕ್ ಕಳ್ಳತನ ನಡೆಯುತ್ತಲೇ ಇವೆ. ಇದೇ ವೇಳೆ ನಗರದ ವಸತಿ ಗೃಹದಲ್ಲಿ ನಡೆದ ಘಟನೆಯೊಂದು ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ. ಎಂದಿನಂತೆ ಬೆಳಿಗ್ಗೆ ಎದ್ದು ಮನೆಯಿಂದ ಹೊರ ಬರಬೇಕು ಅಂದುಕೊಂಡ ಜನರಿಗೆ ಶಾಕ್ ಆಗಿದೆ. ಸುಮಾರು ಎಂಟು ಮನೆಗಳಿಗೆ (Homes) ದುಷ್ಕರ್ಮಿಗಳು (Perpetrators) ಹೊರಗಡೆಯಿಂದ ಕೀಲಿ (Key) ಹಾಕಿದ್ದು, ಜನರು ಮನೆಯಿಂದ ಹೊರಬರದಂತೆ ಮಾಡಿದ್ದರು.
ಆಕಾಶವಾಣಿ ವಸತಿಗೃಹದ ಜನರಿಗೆ ಆತಂಕ:
ಧಾರವಾಡ ನಗರದ ಕೆಸಿಡಿ ವೃತ್ತದ ಬಳಿ ಇರುವ ಆಕಾಶವಾಣಿ ವಸತಿ ಸಮುಚ್ಛಯದಲ್ಲಿ ಒಟ್ಟು 46 ಮನೆಗಳಿವೆ. ಈ ಪೈಕಿ 8 ಮನೆಗಳ ಜನರು ಇಂದು (ಜ.31) ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಲು ಹೊರಟಾಗ ಮನೆ ಬಾಗಿಲು ಬಂದ್ ಆಗಿರುವುದು ತಿಳಿದುಬಂದಿದೆ. ಪೇಪರ್, ಹಾಲು ಹಾಕುವ ಹುಡುಗರನ್ನು ಕರೆದು ಕೇಳಿದಾಗ ಹೊರಗಡೆಯಿಂದ ಕೀಲಿಯನ್ನು ಹಾಕಲಾಗಿದೆ ಎಂದು ತಿಳಿದುಬಂತು.
ಬೆಳ್ಳಂಬೆಳಗ್ಗೆ ತಮ್ಮ ಮನೆಯ ಬಾಗಿಲಿಗೆ ಹೊರಗಿಂದ ಕೀಲಿ ಹಾಕಿರುವುದನ್ನು ಕಂಡ ಜನರು ಆತಂಕಗೊಂಡಿದ್ದಾರೆ. ಕೆಲವರು ಫೋನ್ ಮಾಡಿ ಕೀಲಿ ಒಡೆಸಿಕೊಂಡು ಹೊರಗೆ ಬಂದರೆ, ಮತ್ತೆ ಕೆಲವರು ಆತಂಕದಿಂದ ಮನೆಯಲ್ಲಿಯೇ ಉಳಿದುಕೊಳ್ಳಬೇಕಾಯಿತು. ಈ ವಸತಿಗೃಹ ನಿರ್ಮಿಸಿ 36 ವರ್ಷಗಳೇ ಆಗಿವೆ. ಅವತ್ತಿನಿಂದ ಇವತ್ತಿನವರೆಗೆ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ನಡೆದಿರುವ ಘಟನೆಯ ಹಿಂದೆ ಏನಾದರೂ ದುಷ್ಕೃತ್ಯದ ಸಂಚಿದೆಯಾ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.