ಆ ಸಂಜೆ ಆರು ಗಂಟೆಗೆ ಆಕಾಶವಾಣಿ ವಾರ್ತೆಯಲ್ಲಿ ಸಾರಲಾಯಿತು. ”ಈಗ ಸ್ವಲ್ಪಹೊತ್ತಿನ ಮುಂಚೆ ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಕೊಂದವನು ಒಬ್ಬ ಹಿಂದೂ!”
ಈ ಒಂದು ಸಾಲಿನ, ಎರಡು ವಾಕ್ಯದ ಸುದ್ದಿ ಭೀಕರ ಹಾಗೂ ವ್ಯಾಪಕ ಹಿಂಸಾಚಾರಗಳಿಂದ ಈ ದೇಶವನ್ನು ಉಳಿಸಿತು.
ಮುಖಂಡರು ನಿಟ್ಟುಸಿರುಬಿಟ್ಟು ಇದ್ದದ್ದರಲ್ಲಿಯೇ ಸಮಾಧಾನಪಟ್ಟರು. ಒಂದು ವೇಳೆ ಗಾಂಧೀಜಿ ಹಂತಕ ಮುಸ್ಲಿಮನಾಗಿದ್ದಿದ್ದರೆ ಈ ದೇಶದಲ್ಲಿ ಘನಘೋರ – ಹಿಂದೆ ಎಂದೆಂದೂ ಕಾಣದಿದ್ದ, ಮುಂದೆ ಎಂದೆಂದೂ ಕಾಣಲಾಗದ ಹಿಂದೂ-ಮುಸ್ಲಿಂ ಮಾರಣಹೋಮ ನಿಸ್ಸಂಶಯವಾಗಿ ನಡೆದುಹೋಗುತ್ತಿತ್ತು.
ಅಂದು ಜನವರಿ 30, 1948. ಶುಕ್ರವಾರ ಸಂಜೆ 4 ಗಂಟೆ.
ಮಹಾತ್ಮಾ ಗಾಂಧಿ, ಗೃಹಮಂತ್ರಿ ವಲ್ಲಭಭಾಯಿ ಪಟೇಲರೊಡನೆ ಸಮಾಲೋಚನೆ ನಡೆಸುತ್ತಿದ್ದರು. ಪಟೇಲರು ಮಂತ್ರಿಪದವಿಗೆ ರಾಜೀನಾಮೆ ಕೊಡುವುದಾಗಿ ಭಾರತದ ಗವರ್ನರ್ ಜನರಲ್ ಲೂಯಿ ಮೌಂಟ್ ಬ್ಯಾಟನ್ನರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಮೌಂಟ್ ಬ್ಯಾಟನ್ ಗಾಂಧೀಜಿಯ ಗಮನಕ್ಕೆ ತಂದು – ಪಟೇಲ್ ರಾಜೀನಾಮೆ ಕೊಡದಂತೆ ಪ್ರಯತ್ನಿಸಬೇಕೆಂದು ಸೂಚಿಸಿದರು. ಆ ವಿಚಾರವಾಗಿ ಗಾಂಧೀಜಿ ತಮ್ಮ ಆಪ್ತ ಶಿಷ್ಯ ಪಟೇಲರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದರು. ಸಮಯ ಎಷ್ಟಾಯಿತೆಂಬುದರ ಕಡೆ ಗಮನವಿರಲಿಲ್ಲ. ಐದು ಗಂಟೆಗೆ ಪ್ರಾರ್ಥನಾ ಸಭೆ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಲೇಬೇಕಿತ್ತು. ಅದನ್ನೆಂದಿಗೂ ಗಾಂಧೀಜಿ ಅತಿಕ್ರಮಿಸಿರಲಿಲ್ಲ. ಆದರೆ ಅಂದು ಐದು ಗಂಟೆ ಮೀರಿ ಹತ್ತು ನಿಮಿಷಗಳಾಗುತ್ತಾ ಬಂದಿತ್ತು
ಗಾಂಧೀಜಿ ತಮ್ಮ ‘ಸಮಯ ಸೂಚಕರು’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ತಮ್ಮ ಮೊಮ್ಮಕ್ಕಳು ಆಭಾ ಮತ್ತು ಮನು ಎಂಬ ಯುವತಿಯರು ಸಂಕೋಚದಿಂದಲೇ ಗಾಂಧೀಜಿಗೆ ಗಡಿಯಾರ ತೋರಿಸಿದರು. ಗಾಂಧೀಜಿ ಒಂದೆರಡು ನಿಮಿಷಗಳಲ್ಲಿ ಮಾತು ನಿಲ್ಲಿಸಿದರು. ‘ಪ್ರಾರ್ಥನೆಗೆ ಹೊತ್ತಾಯಿತು’ ಎಂದರು. ಪಟೇಲರು ಕೊಠಡಿಯಿಂದ ಹೊರನಡೆದರು. ಗಾಂಧೀಜಿ ಪ್ರಾರ್ಥನಾ ಸಭೆಗೆ ಹೊರಟು ನಿಂತರು. ತಮ್ಮ ಊರುಗೋಲುಗಳೆಂದೇ ಗಾಂಧೀಜಿ ಕರೆಯುತ್ತಿದ್ದ ಆಭಾ ಮತ್ತು ಮನು ಗಾಂಧೀಜಿಯ ಎಡಬಲಗಳಲ್ಲಿ ನಿಂತರು. ಅವರ ಹೆಗಲ ಮೇಲೆ ಕೈ ಊರಿ ಗಾಂಧೀಜಿ ಪ್ರಾರ್ಥನಾ ಸಭೆಯ ಕಡೆ ನಿಧಾನವಾಗಿ ಹೆಜ್ಜೆ ಹಾಕಿದರು. ಜನವರಿ 12ರಿಂದ ಪ್ರಾರಂಭಿಸಿದ್ದ ಆಮರಣ ಉಪವಾಸವನ್ನು ನಿಲ್ಲಿಸಿ ಕೆಲವೇ ದಿನಗಳಾಗಿತ್ತು, ನಿಶ್ಯಕ್ತಿಯಿಂದ ಬಳಲಿದ್ದರು.
ಆಗಲೇ ಬಿರ್ಲಾ ಭವನದ ಹುಲ್ಲು ಮೈದಾನದಲ್ಲಿ ಜನ ಸೇರಿದ್ದರು. ಗಾಂಧೀಜಿ ಬಂದೊಡನೆ ದೂರ ನಿಂತಿದ್ದವರೆಲ್ಲರೂ ಪ್ರಾರ್ಥನಾ ಜಗಲಿಯ ಕಡೆ ನುಗ್ಗಿಬಂದರು. ಆ ಜನರ ಗುಂಪು ಬದಿಗೆ ಸರಿದು ಇಬ್ಭಾಗವಾಗಿ ಗಾಂಧೀಜಿಗೆ ದಾರಿಬಿಟ್ಟಿತು. ಕೆಲವರು ಕೈ ಮುಗಿದು ನಿಂತಿದ್ದರು. ಆಗ ಒಬ್ಬ ಖಾಕಿ ವಸ್ತ್ರಧಾರಿ ಧಾಂಡಿಗ ಯುವಕ ಗಾಂಧೀಜಿ ಕಡೆಗೆ ನುಗ್ಗಿ ಪಾದಕ್ಕೆ ನಮಸ್ಕರಿಸುವಂತೆ ನಟಿಸುತ್ತ ಮುಗಿದ ಕೈಗಳಿಂದ ಬಾಗಿದ. ಗಾಂಧೀಜಿಯ ಪಕ್ಕದಲ್ಲಿದ್ದ ಮನು ಗಾಂಧಿ ಬೇಡ ಬೇಡ ಎಂದು ಅವನನ್ನು ಮೆಲ್ಲನೆ ತಡೆಯಲು ಹೋದಳು. ಆ ಧಾಂಡಿಗ ಅವಳನ್ನು ಬಲವಾಗಿ ಪಕ್ಕಕ್ಕೆ ದೂಡಿ ಬಲಗೈಯಲ್ಲಿ ಬಚ್ಚಿಟ್ಟುಕೊಂಡಿದ್ದ ಪಿಸ್ತೂಲಿನಿಂದ ಗಾಂಧೀಜಿಯ ಎದೆಗೆ ನೇರವಾಗಿ ಗುಂಡಿಕ್ಕಿ ಮೂರು ಸಲ ಹೊಡೆದ!
‘ಡಂ’ ‘ಡಂ’ ‘ಡಂ’
ಗಾಂಧೀಜಿ ‘ಹೇ ರಾಮ್’ ಎಂದು ಕೊನೆಯ ಸಲ ತಮ್ಮ ಜೀವನದ ಉಸಿರಾಗಿದ್ದ ರಾಮನಾಮ ಜಪಿಸಿ ಕೊನೆ ಉಸಿರು ಎಳೆದು ಕುಸಿದುಬಿದ್ದರು!! ಗಾಂಧೀಜಿಯ ಊರುಗೋಲಾಗಿದ್ದ ಯುವತಿಯರಿಬ್ಬರೂ ಅವರನ್ನು ಹಿಡಿದೆತ್ತಿ ನಿಲ್ಲಿಸಲು ತಡಬಡಿಸಿದರು. ಹೆಮ್ಮರ ಉರುಳಿದರೆ ಊರುಗೋಲು ಆಸರೆಯಾದೀತೇ ? ಅವರೂ ನೆಲಕ್ಕೆ ಕುಸಿದರು. ಗಾಂಧೀಜಿ ಹೊದ್ದುಕೊಂಡಿದ್ದ ಶುಭ್ರ ಧವಳ ಶ್ವೇತ ಖಾದಿ ಅಂಗವಸ್ತ್ರ ರಕ್ತಮಯವಾಯಿತು. ಯುವತಿಯರಿಬ್ಬರೂ ರಕ್ತದ ಕಣ್ಣೀರಿಟ್ಟರು. ಆಗ ಸಂಜೆ ಐದು ಗಂಟೆ ಹದಿನೇಳು ನಿಮಿಷ.
ಕೂಡಿದ್ದ ಜನ ಗಾಂಧೀಜಿ ಬಿದ್ದ ಸ್ಥಳದತ್ತ ನುಗ್ಗಿದರು. ಕೆಲವರು ಕಂಗೆಟ್ಟು, ದಿಕ್ಕೆಟ್ಟು ದಿಕ್ಕಾಪಾಲಾದರು! ಗುಂಡಿಕ್ಕಿ ಕೊಂದ ಆ ಧಾಂಡಿಗನನ್ನು ಬಿರ್ಲಾ ಭವನದ ಮಾಲಿ ರಘುಮಾಲಿ ಹಿಡಿದುಕೊಂಡ. ಪೊಲೀಸರು ಬಂದು ಅವನನ್ನು ವಶಕ್ಕೆ ತೆಗೆದುಕೊಂಡರು. ಇಲ್ಲದಿದ್ದರೆ ಅವನನ್ನು ಜನರೇ ಮುಗಿಸುತ್ತಿದ್ದರು!
ಕಗ್ಗೊಲೆಯ ಸುದ್ದಿ ಕೆಲವೇ ಸೆಕೆಂಡುಗಳಲ್ಲಿ – ನಿಮಿಷಗಳಲ್ಲ – ಕೇವಲ ಕೆಲವೇ ಕ್ಷಣಗಳಲ್ಲಿ ದಿಲ್ಲಿಯಲ್ಲೆಲ್ಲಾ ಕಾಳಿಚ್ಚಿನಂತೆ ಹಬ್ಬಿತು. ನಿಮಿಷಾರ್ಧದಲ್ಲಿ ನೆಹರೂ ಬಂದರು, ಪಟೇಲ್ ಬಂದರು
ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಆಗತಾನೇ ಮದ್ರಾಸಿನಿಂದ ಹಿಂದಿರುಗಿದ್ದವರು ಕೂಡಲೇ ಧಾವಿಸಿಬಂದರು. ಅಬುಲ್ ಕಲಾಂ ಆಝಾದ್ ಬಂದರು. ದೌಲತ್ ರಾಮ್, ರಾಜಕುಮಾರಿ ಅಮೃತಕೌರ್, ಆಚಾರ್ಯ ಕೃಪಲಾನಿ, ಕೆ. ಎಂ. ಮುನ್ಶಿ ಬಂದರು. ದಿಲ್ಲಿಯ ಲಕ್ಷೋಪಲಕ್ಷ ಜನ ಬಿರ್ಲಾ ಭವನಕ್ಕೆ ನುಗ್ಗಿ ಬಂದರು. ಸಾಗರದ ಹೆದ್ದೆರೆಗಳಂತೆ ಭೋರ್ಗರೆದು ದುಃಖಿಸುತ್ತ ಬಂದರು. ಗೋಳಿಟ್ಟು ಬಂದರು!
ಕೊಂದವರು ಯಾರು? ಇದು ಜಗತ್ತಿನ, ತತ್ರಾಪಿ ಭಾರತದ ಜನಮನದಲ್ಲಿ ಭುಗಿಲೆದ್ದ ಪ್ರಶ್ನೆ. ಅವನೇನಾದರೂ ಮುಸ್ಲಿಮನಾಗಿದ್ದರೆ? ಆಗಬಹುದಾದ ಭೀಕರ ಪರಿಣಾಮವನ್ನು ಊಹಿಸುವುದೂ ಅಸಾಧ್ಯ!
ಆ ಸಂಜೆ ಆರು ಗಂಟೆಗೆ ಆಕಾಶವಾಣಿ ವಾರ್ತೆಯಲ್ಲಿ ಸಾರಲಾಯಿತು. ”ಈಗ ಸ್ವಲ್ಪಹೊತ್ತಿನ ಮುಂಚೆ ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಕೊಂದವನು ಒಬ್ಬ ಹಿಂದೂ!”
ಈ ಒಂದು ಸಾಲಿನ, ಎರಡು ವಾಕ್ಯದ ಸುದ್ದಿ ಭೀಕರ ಹಾಗೂ ವ್ಯಾಪಕ ಹಿಂಸಾಚಾರಗಳಿಂದ ಈ ದೇಶವನ್ನು ಉಳಿಸಿತು. ಮುಖಂಡರು ನಿಟ್ಟುಸಿರುಬಿಟ್ಟು ಇದ್ದದ್ದರಲ್ಲಿಯೇ ಸಮಾಧಾನಪಟ್ಟರು. ಒಂದು ವೇಳೆ ಗಾಂಧೀಜಿ ಹಂತಕ ಮುಸ್ಲಿಮನಾಗಿದ್ದಿದ್ದರೆ ಈ ದೇಶದಲ್ಲಿ ಘನಘೋರ – ಹಿಂದೆ ಎಂದೆಂದೂ ಕಾಣದಿದ್ದ, ಮುಂದೆ ಎಂದೆಂದೂ ಕಾಣಲಾಗದ ಹಿಂದೂ-ಮುಸ್ಲಿಂ ಮಾರಣಹೋಮ ನಿಸ್ಸಂಶಯವಾಗಿ ನಡೆದುಹೋಗುತ್ತಿತ್ತು. ಇಲ್ಲಿ ಆಗಬಹುದಾಗಿದ್ದ ಮುಸ್ಲಿಮರ ಹತ್ಯಾಕಾಂಡದಿಂದ ಪಾಕಿಸ್ತಾನ ಮತ್ತಿತರ ದೇಶಗಳಲ್ಲಿದ್ದ ಹಿಂದೂ, ಸಿಖ್ ಮುಂತಾದವರ ಹೆಣಗಳ ಬೆಟ್ಟದ ರಾಶಿಗಳೇ ಬೆಳೆಯುತ್ತಿದ್ದವು! ಇದು ನಿರಾಧಾರ ಎಂದು ಯಾರೂ ಹೇಳುವಂತಿರಲಿಲ್ಲ. ದೇಶ ಇಬ್ಭಾಗವಾದಾಗ ಭಾರತ ಪಾಕಿಸ್ತಾನಗಳಲ್ಲಿ ಅದಕ್ಕಿಂತ ಮೊದಲು 1946ರಲ್ಲಿ ಅವಿಭಾಜ್ಯ ಭಾರತದಲ್ಲಿ ಆದ ಹಿಂದೂ-ಮುಸ್ಲಿಂ ಗಲಭೆಗಳಲ್ಲಿ, ದೊಂಬಿಗಳಲ್ಲಿ ಅದರಲ್ಲೂ ನವಖಾಲಿ ಮತ್ತು ಬಿಹಾರ್ ಪ್ರಾಂತಗಳಲ್ಲಿ ಹರಿದ ರಕ್ತದ ಕಾಲುವೆ, ಈ ಸಂದರ್ಭದಲ್ಲಿ ಪ್ರತಿಯೊಂದು ಊರು, ನಗರ, ಶಹರಗಳಲ್ಲಿ ಹರಿಯುತ್ತಿತ್ತು! ದೇಶ ವಿಭಜನೆಯಾದೊಡನೆ ನಿಸ್ಸಂದೇಹವಾಗಿ ಲಾಹೋರ್ ಶಹರದಲ್ಲಿ ಮಕ್ಕಳು, ಮರಿಗಳು, ಹೆಂಗಸರು, ಮುದುಕರು, ಭಿಕ್ಷುಕರು, ಶ್ರೀಮಂತರು, ಬಡವ ಬಲ್ಲಿದರು, ಆಪ್ತರು-ಮಿತ್ರರು ಎಂಬ ಭೇದವಿಲ್ಲದೆ ಹಿಂದೂ-ಸಿಖ್, ಪಾರ್ಸಿ, ಕ್ರಿಶ್ಚಿಯನ್ ಜನರನ್ನು ಭರ್ಜಿ, ಈಟಿ, ಬಡಿಗೆ, ಬಂದೂಕು, ಕೊಡಲಿ, ಮಚ್ಚು, ಕತ್ತಿ..ಗಳಿಂದ ಕೊಚ್ಚಿ ಹಾಕಿದ್ದರು! ರುಂಡ ಮುಂಡ ಚೆಂಡಾಡಿದ್ದರು. ಲಾಹೋರಿನ ಚರಂಡಿಗಳಲ್ಲಿ ಗಟಾರಗಳಲ್ಲಿ ರಕ್ತವೇ ಹರಿಯಿತು. ಬಾಗಿಲು ಮುಚ್ಚಿಕೊಂಡು ಅಡಗಿ ಕುಳಿತಿದ್ದವರ ಮನೆಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿದರು. ಈ ಚಿತ್ರಹಿಂಸೆ, ಹತ್ಯಾಕಾಂಡದಿಂದ ತಪ್ಪಿಸಿಕೊಳ್ಳಲು ರೈಲು, ಮೋಟಾರು ಸೈಕಲ್, ಗಾಡಿ, ಕಾಲ್ನಡಿಗೆಯಲ್ಲಿ ಓಡಿ ಹೋಗುತ್ತಿದ್ದವರನ್ನು ಬೆನ್ನಟ್ಟಿ ಮೃಗ ಬೇಟೆ ಆಡಿದಂತೆ ತುಂಡರಿಸಿದ್ದರು! ಇದಕ್ಕಿಂತಲೂ ಹೇಯವಾಗಿ ಹೆಂಗಸರ ಮಾನಹಾನಿ ಮಾಡಿದ್ದರು!
ಇಲ್ಲಿ ದಿಲ್ಲಿಯಲ್ಲಿ ಲಾಹೋರಿನಲ್ಲಿ ನಡೆದಂತೆಯೇ ಪ್ರತೀಕಾರಾರ್ಥವಾಗಿ ಕಗ್ಗೊಲೆ, ಸ್ತ್ರೀ ಮಾನಭಂಗ, ಸಜೀವದಹನ, ಅವ್ಯಾಹತವಾಗಿ ನಡೆಯಿತು. ಅಲ್ಲಿ ಹಿಂದೂ, ಸಿಖ್, ಈಸಾಯಿ, ಪಾರ್ಸಿ ಅವರ ಆಸ್ತಿಹರಣ ಮಾಡಿದಂತೆ, ಇಲ್ಲಿಯೂ ಮುಸ್ಲಿಮರ ಮನೆ, ಅಂಗಡಿ, ಆಸ್ತಿ ಲೂಟಿ ಮಾಡಿದರು. ಬಲಾತ್ಕಾರವಾಗಿ ಆಕ್ರಮಣ ಮಾಡಿದರು. ದಿಲ್ಲಿಯ ಗಟಾರಗಳಲ್ಲಿ, ಚರಂಡಿಗಳಲ್ಲಿ ರಕ್ತಹೊಳೆಯಂತೆ ವಾರಗಟ್ಟಲೆ ಹರಿಯಿತು. ಇದನ್ನು ಕಣ್ಣಾರೆ ಕಂಡ ನೆಹರೂ: ‘Our people have gone mad ‘ ಎಂದು ನಿರಾಸೆಯ ನಿಟ್ಟುಸಿರುಬಿಟ್ಟರು. ಈ ದೊಂಬಿ, ಲೂಟಿ, ಹತ್ಯಾಕಾಂಡವನ್ನು ನಿಯಂತ್ರಿಸಲು ಸೈನ್ಯಕ್ಕೂ ಸಾಧ್ಯವಾಗಲಿಲ್ಲ. ಅನೇಕ ಸಂದರ್ಭಗಳಲ್ಲಿ ಸೈನಿಕರು, ಪೊಲೀಸರು ಜನರ ಈ ಕಿರಾತ ಮೃಗೀಯ ವರ್ತನೆಯನ್ನು ಮೂಕಪ್ರೇಕ್ಷಕರಾಗಿ ಬಹುಶಃ ಅದನ್ನು ಸಮ್ಮತಿಸುವಂತೆ, ಪ್ರೋತ್ಸಾಹಿಸುವಂತೆ ನೋಡುತ್ತಿದ್ದರು! ಅಂದಮೇಲೆ ಈಗ ಗಾಂಧಿ ಹಂತಕ ಮುಸ್ಲಿಂ ಯುವಕನಾಗಿದ್ದಿದ್ದರೆ ಭಾರತದ ಹಳ್ಳಿ, ನಗರ, ಶಹರ, ಹೊಲ ಗದ್ದೆ, ಮನೆ ಮಠ… ಎಲ್ಲೆಲ್ಲೂ ಹತ್ಯಾಕಾಂಡ, ರಕ್ತದ ಹೊಳೆ ನಿಸ್ಸಂದೇಹವಾಗಿ ಹರಿಯುತ್ತಿತ್ತು! ಹೀಗೆಯೇ ಇದಕ್ಕಿಂತ ಹೆಚ್ಚು ಹಾನಿ ಆಗಬಹುದಿತ್ತು ಎಂಬುದಕ್ಕೆ ನಮ್ಮ ಕಣ್ಣೆದುರಿನಲ್ಲಿಯ 2002ರಲ್ಲಿ ಗುಜರಾತ್‌ನಲ್ಲಿ ನಡೆದ ನರಮೇಧವೇ ಪ್ರತ್ಯಕ್ಷ ನಿದರ್ಶನ!
ದೇಶ ವಿಭಜನೆಗಿಂತ ಮೊದಲು ಕಲ್ಕತ್ತಾ, ನವಖಾಲಿಯಲ್ಲಿ ಆದ ಮಾರಣಹೋಮವಂತೂ ಇದರಷ್ಟೇ ಭಯಾನಕವಾಗಿತ್ತು. ಆಗ ಅವಿಭಾಜ್ಯ ಬಂಗಾಲದಲ್ಲಿ ಸುಹವರ್ದಿ ಮುಸ್ಲಿಂ ಲೀಗ್ ಮಂತ್ರಿಮಂಡಲವೇ ಇದ್ದುದರಿಂದ ಕಲ್ಕತ್ತಾದಲ್ಲಿಯೇ ರಕ್ತದ ಹೊಳೆ ಹರಿಯಿತು !! ಅರೆಜೀವ ಇದ್ದ ಗಾಯಾಳುಗಳನ್ನು ರಣಹದ್ದುಗಳು, ಕಾಗೆ, ನಾಯಿಗಳು, ಹರಿದು ತಿಂದವು! ಖಡ್ಗದಿಂದ ರುಂಡವನ್ನು ತುಂಡರಿಸಿದಾಗ ಚಿಮ್ಮಿದ ರಕ್ತ ಬೀದಿಯ ಗೋಡೆಗಳ ಮೇಲೆ ಚೀರ್ಕೊಳೆಯಿಂದ ಸಿಂಪಡಿಸಿದಂತೆ ಮೆತ್ತಿಕೊಂಡಿತ್ತು!! ನವಖಾಲಿಯಲ್ಲಿ ಇದಕ್ಕಿಂತಲೂ ಭೀಕರ ಮಾನವ ಹತ್ಯಾಕಾಂಡವಾಗಿತ್ತು! ಗಂಡಂದಿರನ್ನು ಮರಕ್ಕೆ, ಕಂಬಕ್ಕೆ ಕಟ್ಟಿಹಾಕಿ ಅವರ ಹೆಂಡಂದಿರನ್ನು ಅವರ ಕಣ್ಣೆದುರಿನಲ್ಲಿ ಮಾನಭಂಗ ಮಾಡಿದ್ದರು!! ಆ ರಕ್ಕಸ ಕೃತ್ಯ ಮಾಡಿದ ಮೇಲೆ ಆ ಮಹಿಳೆಯರ ಕಣ್ಣೆದುರಿಗೇ ಗಂಡಂದಿರನ್ನು ಖಡ್ಗದಿಂದ ತುಂಡರಿಸಿದರು. ಗುಂಡಿಕ್ಕಿ ಕೊಂದರು. ಆಗ ಅಲ್ಲಿ ಯಾವ ಸರಕಾರೀ ನೌಕರರೂ ಅವರಿಗೆ ರಕ್ಷಣೆ ಕೊಡಲಿಲ್ಲ. ಅಂತಹ ಸಂದರ್ಭದಲ್ಲಿ ಗಾಂಧೀಜಿ ಒಬ್ಬಂಟಿಗರಾಗಿ, ಹಗಲು ರಾತ್ರಿ ಎನ್ನದೆ, ಕತ್ತಲಲ್ಲಿ ಲಾಟೀನು ಹಿಡಿದುಕೊಂಡು ಬರಿಗಾಲಲ್ಲಿ ಮನೆ ಮನೆಗೆ ಹೋಗಿ ಸಾಂತ್ವನ ಹೇಳಿದರು. ಆ ಹತ್ಯಾಕಾಂಡವನ್ನು ನಿಲ್ಲಿಸಿದರು. ಕಲ್ಕತ್ತೆಯ ರಕ್ತದ ಕೆಸರಿನಲ್ಲಿ ಕೋಲೂರಿಕೊಂಡು ಜೊತೆಗೆ ಯಾವ ಅಂಗರಕ್ಷಕರೂ ಇಲ್ಲದೆ ಬೀದಿ ಬೀದಿಯಲ್ಲಿ ನಡೆದು ಜನರಿಗೆ ಹಿಂದೂ-ಮುಸ್ಲಿಂ ಮೈತ್ರಿ ಸಂದೇಶವನ್ನು ಸಾರಿದರು, ಸೌಹಾರ್ದತೆ ಉಂಟುಮಾಡಿದರು! ಖಡ್ಗಗಳನ್ನು ಕಳಚಿ ಬದಿಗಿಟ್ಟು ಹಿಂದೂ-ಮುಸ್ಲಿಮರು ಅನ್ಯೋನ್ಯ ಪ್ರೀತಿ ವಿಶ್ವಾಸದಿಂದ ಬಾಳಲು ಪಣತೊಟ್ಟರು. ಹಿಂದೆ ಯಾವ ಬುದ್ಧನೂ, ಜೀಸಸ್ ಕ್ರೈಸ್ತನೂ ಮಾಡದಿದ್ದ ಪವಾಡವನ್ನು ಗಾಂಧಿ ಬಂಗಾಳದಲ್ಲಿ ಮಾಡಿ ತೋರಿಸಿದ್ದರು! ಯಾವ ಸೈನ್ಯದಿಂದಲೂ ಆಗದಿದ್ದ ಕೆಲಸವನ್ನು ಈ ‘ಅರೆಬತ್ತಲೆ ಫಕೀರ’ ಏಕಾಂಗಿಯಾಗಿ ಸಾಧಿಸಿದ್ದ. ಇದನ್ನು ಕಂಡ ಬಂಗಾಳದ ಅಂದಿನ ಗವರ್ನರ್ ಮಿ. ಆರ್. ಜೆ. ಕೇಸಿ ”ಗಾಂಧಿ ಈಸ್ ಮೈ ಒನ್‌ಮ್ಯಾನ್ ಆರ್ಮಿ ಆಫ್ ಪೀಸ್” (ಗಾಂಧಿ ನನ್ನ ಏಕವ್ಯಕ್ತಿ ಶಾಂತಿ ಸೈನ್ಯ) ಎಂದಿದ್ದರು!
ಅಂಥದೇ ಪವಾಡವನ್ನು ಗಾಂಧೀಜಿ ಜನವರಿ 1948ರಲ್ಲಿ ದಿಲ್ಲಿಯಲ್ಲೂ ಮಾಡಿದ್ದರು. ಹಿಂದೂ-ಮುಸ್ಲಿಂ ಸೌಹಾರ್ದ ಸ್ಥಾಪನೆಗಾಗಿಯೇ ದಿಲ್ಲಿಯಲ್ಲಿ ಜನವರಿ 12ರಿಂದ ಆಮರಣ ಉಪವಾಸ ಕೈಗೊಂಡು ನರಮೇಧ ನಿಲ್ಲಿಸಿದ್ದರು !! ಕೋಮುಸೌಹಾರ್ದ ನೆಲೆಸಿದ ಮೇಲೆ ಉಪವಾಸ ನಿಲ್ಲಿಸಿದ್ದರು !
ಇಂತಹ ಶಾಂತಿದೂತನನ್ನು, ಅಹಿಂಸಾಮೂರ್ತಿಯನ್ನು ಕೋಮುಸೌಹಾರ್ದದ ಹರಿಕಾರನನ್ನು, ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಧರ್ಮಾತ್ಮನನ್ನು, ಪ್ರೇಮ ಸಂದೇಶ ವಾಹಕನನ್ನು ಇಂದು ಓರ್ವ ಹಿಂದೂ ದ್ವೇಷ ತುಂಬಿದ ವಿಷಜಂತು ಹತ್ಯೆ ಮಾಡಿತ್ತು. ಅದೂ ಹಿಂದೂ ಧರ್ಮ ರಕ್ಷಣೆಯ ಹೆಸರಿನಲ್ಲಿ! ಹಿಂದುತ್ವದ ಸ್ಥಾಪನೆಗಾಗಿ !!
***
ಆ ಇಬ್ಬರು ಯುವತಿಯರು ಕುಸಿದುಬಿದ್ದಿದ್ದ ಬಾಪೂ ದೇಹದ ಪಕ್ಕದಲ್ಲಿ ಕುಳಿತು ಆ ಮಹಾತ್ಮನ ದೇಹವನ್ನು ಅಪ್ಪಿಕೊಂಡು ಶೋಕಗ್ರಸ್ತರಾದರು, ನೆರೆದಿದ್ದವರ ಸಹಾಯದಿಂದ ಬಾಪೂ ದೇಹವನ್ನು ಅವರಿರುತ್ತಿದ್ದ ಬಿರ್ಲಾ ಭವನದ ಕೊಠಡಿಗೆ ಕೊಂಡೊಯ್ದು ಹಾಸಿಗೆ ಮೇಲೆ ಮಲಗಿಸಿದರು! ತಲೆಯ ಕಡೆ ‘ಹೇ ರಾಮ್’ ಎಂದೂ ಪಾದದ ಕಡೆ ‘ಓಂ’ ಎಂದೂ ಹೂವುಗಳಿಂದ ಚಿತ್ರಿಸಿದರು. ಗಾಂಧೀಜಿಗೆ ಅತ್ಯಂತ ಪ್ರಿಯವಾಗಿದ್ದ, ತಾಯಿಯಂತಿದ್ದ ‘ಗೀತೆ’ಯ ‘ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ’ ಎಂಬ ಸಾಲಿನಿಂದ ಪ್ರಾರಂಭವಾಗುವ ಶ್ಲೋಕಗಳನ್ನು ಸಣ್ಣದನಿಯಲ್ಲಿ ಪಠಿಸತೊಡಗಿದರು. ದೇಹದ ಸುತ್ತ ಹನ್ನೆರಡು ದೀಪಗಳನ್ನು ಹಚ್ಚಿ ಸುಗಂಧ ಪರಿಮಳದ ಊದಿನ ಕಡ್ಡಿಗಳನ್ನು ಹಚ್ಚಿದರು.
ನೆಹರೂ ಕೊಠಡಿಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದರು. ಕೆನ್ನೆಗುಂಟ ಕಣ್ಣೀರು ಸುರಿಯುತ್ತಿತ್ತು. ಬಹುಶಃ ಅವರ ತಂದೆ ಮೋತಿಲಾಲ್ ನೆಹರೂ ಸತ್ತಾಗಲೂ ಹಾಗೆ ಕಣ್ಣೀರು ಸುರಿಸಿದರೋ ದಾಖಲೆಯಿಲ್ಲ. ತಂದೆಯ ಋಣಕ್ಕಿಂತಲೂ ಮಿಗಿಲಾಗಿ ಬಾಪೂಗೆ ಋಣಿಯಾಗಿದ್ದರು! ಇನ್ನೊಂದು ಕಡೆ ವಲ್ಲಭಬಾಯಿ ಗೋಡೆಗೆ ಆತುಕೊಂಡು ಶಿಲಾಮೂರ್ತಿಯಂತೆ ಕುಳಿತಿದ್ದರು. ಆಝಾದ್ ಮುಂತಾದ ಕೇಂದ್ರ ಮಂತ್ರಿಮಂಡಲದ ಸದಸ್ಯರೆಲ್ಲ ಬಂದರು. ಗವರ್ನರ್ ಜನರಲ್ ಲೂಮಿ ಮೌಂಟ್ ಬ್ಯಾಟನ್ ಬಂದರು. ಮೌನವಾಗಿ ತಲೆಬಾಗಿ ನಿಂತರು. ಆಗ ತಾನೇ ಮಲಗಿ ನಿದ್ರಿಸುತ್ತಿರುವಂತೆ ಪ್ರಶಾಂತ ಮುಖಮುದ್ರೆಯಿಂದ ಚಿರನಿದ್ರೆಯಲ್ಲಿದ್ದ ಮಹಾತ್ಮನಿಗೆ ತಲೆ ಬಾಗಿದರು. ತಮ್ಮ ಅಜ್ಜಿ ರಾಣಿ ವಿಕ್ಟೋರಿಯಾ ಸ್ಥಾಪಿಸಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದಿಂದ ಕಿತ್ತೊಗೆದ ಯುದ್ಧಕ್ಕೆ ಕಾರಣಕರ್ತರಾಗಿದ್ದ ಗಾಂಧಿಗೆ ಮಣಿದರು. ಕೊಠಡಿಯಲ್ಲಿ ಇದ್ದವರೊಬ್ಬರು, ಗುಲಾಬಿ ಹೂಗಳ ಪಕಳೆಯನ್ನು ಅವರ ಕೈಗೆ ಕೊಟ್ಟರು. ಮೌಂಟ್ ಬ್ಯಾಟನ್ ಆ ಪುಷ್ಪಾಂಜಲಿಯನ್ನು ಗಾಂಧೀಜಿಯ ಕಳೇಬರದ ಮೇಲೆ ಅರ್ಪಿಸಿ ತಮಗೆ ತಾವೇ ”ಮಹಾತ್ಮಾ ಗಾಂಧಿ, ಬುದ್ಧಕ್ರೈಸ್ತರಂತೆ ಇತಿಹಾಸದಲ್ಲಿ ಶಾಶ್ವತವಾಗಿ ಅಜರಾಮರರಾಗುವರು” ಎಂದರು. ಕಣ್ಣೊರೆಸಿಕೊಳ್ಳುತ್ತಿದ್ದ ನೆಹರೂ ಮತ್ತು ಗರ ಬಡಿದವರಂತೆ ಮೂಕರಾಗಿದ್ದ ಪಟೇಲರ ಕಡೆ ನೋಡಿ, ಇಬ್ಬರನ್ನೂ ಆಲಂಗಿಸುವ ಭಂಗಿಯಲ್ಲಿ ಬಾಹುಗಳನ್ನು ಚಾಚಿ : ”ನಾನು ಗಾಂಧೀಜಿಯನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದು ನಿಮ್ಮಿಬ್ಬರಿಗೂ ಗೊತ್ತು… ಸರಿ, ನಾನೊಂದು ಮಾತು ಹೇಳಲು ಬಯಸುತ್ತೇನೆ. ಕೊನೆಯ ಬಾರಿ ನಾನವರೊಡನೆ ಮಾತನಾಡಿದಾಗ ಅವರ ಅತ್ಯಂತ ಶ್ರೇಷ್ಠ ಮಿತ್ರರೂ, ಅವರ ಬೆಂಬಲಿಗರೂ, ಪ್ರೀತಿಪಾತ್ರರೂ, ಆರಾಧಕರೂ ಆದ ನೀವಿಬ್ಬರೂ ಒಬ್ಬರಿಂದೊಬ್ಬರು ದೂರವಾಗುತ್ತಿರುವುದು ಆತಂಕವನ್ನುಂಟುಮಾಡಿದೆ ಎಂದರು. ‘ಈಗ ನನ್ನ ಮಾತಿಗಿಂತಲೂ ನಿಮ್ಮ ಮಾತನ್ನೇ ಹೆಚ್ಚು ಕೇಳುತ್ತಾರೆ (ಮನ್ನಿಸುತ್ತಾರೆ) ಅವರಿಬ್ಬರನ್ನೂ ಒಂದುಗೂಡಿಸಲು ನೀವು ಪ್ರಯತ್ನಿಸಿ’ ಎಂದು ಹೇಳಿದರು. ಇದೇ ಅವರ ಕೊನೆಯ ಬಯಕೆಯಾಗಿತ್ತು” ಈ ಎದೆ ತುಂಬಿ ಹೇಳಿದ ಮಾತನ್ನು ಕೇಳಿದ ಅವರಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡರು.
ಹೊರಡುವ ಮುನ್ನ ನೆಹರೂ ಅವರತ್ತ ತಿರುಗಿ ”ನೀವು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಬೇಕು. ರಾಷ್ಟ್ರ ಈಗ ನಿಮ್ಮ ಮಾರ್ಗದರ್ಶನವನ್ನು ನಿರೀಕ್ಷಿಸುತ್ತದೆ” ಎಂದರು.
”ಇಲ್ಲ, ನನ್ನಿಂದಾಗದು. ನಾನು ತುಂಬ ವ್ಯಾಕುಲಗೊಂಡಿದ್ದೇನೆ. ನಾನು ಅದಕ್ಕೆ ಸಿದ್ಧನಿಲ್ಲ. ಏನು ಹೇಳಬೇಕೋ ನನಗೆ ತೋಚುತ್ತಿಲ್ಲ” ಎಂದರು ನೆಹರೂ.
”ಚಿಂತಿಸಬೇಡಿ, ನೀವು ಏನು ಹೇಳಬೇಕೆಂಬುದನ್ನು ದೇವರೇ ಹೇಳಿಕೊಡುತ್ತಾನೆ.”
ಆ ರಾತ್ರಿ ನೆಹರೂ ಆಕಾಶವಾಣಿಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು: ಆ ಭಾಷಣವನ್ನು ಈ ಲೇಖಕ ಕೇಳಿದ್ದ.
”ನಮ್ಮ ಬಾಳಿನ ಬೆಳಕು ಆರಿಹೋಯಿತು. ಎಲ್ಲೆಲ್ಲಿಯೂ ಕಗ್ಗತ್ತಲೆ ಕವಿದಿದೆ. ನಮ್ಮ ನೆಚ್ಚಿನ ನಾಯಕ, ಬಾಪು ಎಂದು ಕರೆಯುತ್ತಿದ್ದ ಬೆಳಕು ನಮ್ಮ ರಾಷ್ಟ್ರಪಿತ ಹೋಗಿಬಿಟ್ಟರು. ಆರಿಹೋಯಿತು ಎಂದೆ. ಅದು ತಪ್ಪು. ಈ ದೇಶವನ್ನು ಬೆಳಗಿಸಿದ ಆ ಬೆಳಕು ಸಾಮಾನ್ಯವಾದ ಬೆಳಕಲ್ಲ, ಸಾವಿರಾರು ವರ್ಷಗಳು ಆ ಬೆಳಕು ಕಾಣಿಸುತ್ತಲೇ ಇರುತ್ತದೆ. ಜಗತ್ತು ಅದನ್ನು ನೋಡುತ್ತದೆ. ಆ ಬೆಳಕು ಅಸಂಖ್ಯಾತ ಹೃದಯಗಳಿಗೆ ತಂಪು, ಸಾಂತ್ವನ ನೀಡುತ್ತದೆ. ಆ ಬೆಳಕು ನಿತ್ಯ ಸತ್ಯಗಳನ್ನು ಪ್ರತಿನಿಧಿಸುತ್ತದೆ. ನಮಗೆ ಸತ್ಪಥವನ್ನು ನೆನಪು ಮಾಡುತ್ತದೆ; ತಪ್ಪಾಗುವುದನ್ನು ತಪ್ಪಿಸುತ್ತದೆ. ಈ ಪುರಾತನ ದೇಶವನ್ನು ಸ್ವಾತಂತ್ರ್ಯದೆಡೆಗೆ ಕೊಂಡೊಯ್ಯುತ್ತದೆ.”
ನೆಹರೂ ಮಾತನಾಡಿದ ನಂತರ ಸರ್ದಾರ ಪಟೇಲ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು:
”ಇದೀಗ ನನ್ನ ಪ್ರಿಯ ಸೋದರ ಜವಾಹರಲಾಲ್ ನಿಮ್ಮನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಹೃದಯ ಹಿಂಡುತ್ತಿದೆ. ನಿಮಗೆ ನಾನು ಏನು ಹೇಳಲಿ? ನನ್ನ ನಾಲಗೆ ಸೇದಿಹೋಗಿದೆ. ಈ ದಿನ ಭಾರತಕ್ಕೆ ದುಃಖ, ಲಜ್ಜೆ ಮತ್ತು ಸಂಕಟದ ದಿನ. ಇಂದು ಸಂಜೆ 4 ಗಂಟೆಗೆ ಗಾಂಧೀಜಿಯ ಬಳಿ ಹೋಗಿ ಒಂದು ಗಂಟೆ ಇದ್ದೆ.
ನಾನು ಇನ್ನ್ನೂ ಮನೆ ಮುಟ್ಟಿರಲಿಲ್ಲ. ಯಾರೋ, ಗಾಂಧೀಜಿಯನ್ನು ಒಬ್ಬ ಹಿಂದೂ ಮೂರು ಬಾರಿ ಗುಂಡಿಕ್ಕಿ ಹತ್ಯೆ ಮಾಡಿದನೆಂದು ಸುದ್ದಿ ಕೊಟ್ಟರು. ಕೂಡಲೇ ನಾನು ಬಿರ್ಲಾ ಗೃಹಕ್ಕೆ ಹಿಂದಿರುಗಿ ಬಾಪು ಬಳಿಯಿದ್ದೆ. ಅವರ ಕಣ್ಣುಗಳು ಮುಚ್ಚಿದ್ದವು. ಆದರೆ ಮುಖಮುದ್ರೆ ಎಂದಿನಂತೆ ಪ್ರಶಾಂತವಾಗಿತ್ತು. ಅವರ ಮುಖದಲ್ಲಿ ಕರುಣೆ, ಕ್ಷಮಾಗುಣದ ಲಕ್ಷಣಗಳಿದ್ದವು.
ಸ್ನೇಹಿತರೇ, ಇದು ಕೋಪಕ್ಕೆ ಸಮಯವಲ್ಲ. ನಾವೆಲ್ಲರೂ ಹೃದಯ ಶೋಧ ಮಾಡಿಕೊಳ್ಳಬೇಕಾದ ಸಮಯ, ಈಗ ನಮ್ಮ ನ್ಯಾಯಸಮ್ಮತ ಸಹಜವಾದ ಕೋಪಕ್ಕೆ ದಾರಿ ಕೊಟ್ಟರೆ ನಮ್ಮ ಗೌರವಾನ್ವಿತ ಪ್ರಿಯ ನಾಯಕರ ಬೋಧನೆಗಳನ್ನು ಅವರು ತೀರಿದ ಸ್ವಲ್ಪ ಕಾಲದಲ್ಲೇ ಮರೆತುಬಿಟ್ಟಂತೆ ಆದೀತು. ಅವರು ಬದುಕಿದ್ದಾಗಲೇ ನಾವು ಅವರ ಹಿಂದೆ ಅರ್ಧಂಬರ್ಧ ಹಿಂಬಾಲಿಸುತ್ತಿದ್ದೆವು.
ಇತ್ತೀಚೆಗೆ ಭಾರತ ಭರಿಸಬೇಕಾದ ಭಾರ ಬಹು ಅಗಾಧವಾದದ್ದು. ಆ ಮಹಾತ್ಮನ ಬೆಂಬಲ ಮತ್ತು ಆಸರೆ ಇಲ್ಲದೆ ಹೋಗಿದ್ದರೆ ನಮ್ಮ ಬೆನ್ನು ಮುರಿದುಹೋಗುತ್ತಿತ್ತು. ಆ ಆಸರೆ ಈಗ ಇಲ್ಲವಾಗಿದೆ. ಆದರೆ ಗಾಂಧೀಜಿ ನಮ್ಮ ಹೃದಯದಲ್ಲಿ ಚಿರಕಾಲ ಜೀವಿಸುವರು, ನಾಳೆ ಸಂಜೆ 4 ಗಂಟೆಗೆ ಅವರ ದೇಹ ಬೂದಿಯಾಗುವುದು. ಆದರೆ ಅವರ ಅವಿನಾಶ ಬೋಧನೆಗಳು ನಮ್ಮಲ್ಲಿ ಉಳಿಯುತ್ತವೆ.
ಅವರನ್ನು ಕೊಂದ ಹುಚ್ಚು ಯುವಕ ಅವರ ದಿವ್ಯ ಸಂದೇಶಗಳನ್ನು ಧ್ವಂಸ ಮಾಡಿದೆನೆಂದು ಭಾವಿಸಿದ್ದರೆ ಅದು ಶುದ್ಧ ತಪ್ಪು. ಬಹುಶಃ ಭಗವಂತ ಗಾಂಧೀಜಿ ತಮ್ಮ ಮರಣದ ಮೂಲಕ ತಮ್ಮ ದೈವೀ ಕಾರ್ಯವನ್ನು ಈಡೇರಿಸಬೇಕೆಂದು ಇಚ್ಛಿಸಿದ್ದನೋ ಏನೋ !”
ಈ ಭಾಷಣಗಳಾದ ಮೇಲೆ ನಾಳೆ ನಡೆಯಬೇಕಾಗಿದ್ದ ಅಂತಿಮ ಯಾತ್ರೆಯ ವಿಚಾರವಾಗಿ ನೆಹರೂ ಪಟೇಲ್ ಗಮನಹರಿಸಿದರು. ಈ ಮಾತುಗಳನ್ನು ದಿಲ್ಲಿ ಆಕಾಶವಾಣಿ ಕೇಂದ್ರದಿಂದ ಬಿತ್ತರಿಸುತ್ತಿದ್ದಾಗ ತಿರುಚಿರಪಳ್ಳಿ ಆಕಾಶವಾಣಿ ಕೇಂದ್ರದ ನಿರ್ದೇಶಕರು ಗಾಂಧಿ ಅಸ್ತಂಗತರಾದ ಬಗ್ಗೆ ತಮ್ಮ ಸಂದೇಶವನ್ನು ಕೊಡಬೇಕೆಂದು ಪಾಂಡಿಚೇರಿ ಆಶ್ರಮದಲ್ಲಿ ಶ್ರೀಅರವಿಂದ ಮಹರ್ಷಿಗಳನ್ನು ಕೇಳಿದಾಗ ಅವರು:
”ನಮ್ಮನ್ನು ಆವರಿಸಿರುವ ಈಗಿನ ಸನ್ನಿವೇಶದಲ್ಲಿ ನಾನು ಸುಮ್ಮನಿರುವುದು ಲೇಸೆಂದು ಬಗೆದಿದ್ದೇನೆ. ಯಾಕೆಂದರೆ ಇಂತಹ ಘಟನೆ ಗಳು ಸಂಭವಿಸಿದಾಗ ಯಾವ ಮಾತುಗಳೂ ನೀರಸವಾಗಿ ಕಾಣುತ್ತವೆ. ಆದರೂ ನಾನು ಇಷ್ಟನ್ನು ಹೇಳಬಯಸುತ್ತೇನೆ. ನಮ್ಮನ್ನು ಐಕ್ಯತೆಗೆ ಅಲ್ಲದಿದ್ದರೂ ಸ್ವಾತಂತ್ರ್ಯಕ್ಕೆ ಕರೆದೊಯ್ದ ಜ್ಯೋತಿ ಇನ್ನೂ ಉರಿಯುತ್ತಿದೆ. ಅದು ಜಯಶಾಲಿಯಾಗುವವರೆಗೂ ಬೆಳಗುತ್ತಲೇ ಇರುತ್ತದೆ.”
ಈ ಸುದ್ದಿ ಕೇಳಿದ ರಮಣ ಮಹರ್ಷಿಗಳ ಕಣ್ಣಾಲಿಗಳು ತೇವಗೊಂಡವು. ಬಾಪೂಜಿಯ ಈ ದುರಂತಮಯ ಹತ್ಯೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಕಗ್ಗತ್ತಲು ಕವಿಯಿತು. ಬಡವರ ಮನೆಗಳಲ್ಲಿ ಒಲೆಗಳು ಉರಿಯಲಿಲ್ಲ! ಶುಕ್ರವಾರ ಸಂಜೆಯಿಂದ ಶನಿವಾರ ಅಂತ್ಯಕ್ರಿಯೆ ಮುಗಿಯುವವರೆಗೂ ಇಡೀ ದೇಶ ಯಾರೂ ಕರೆಕೊಡದಿದ್ದರೂ ವ್ಯಾಪಾರ ವಹಿವಾಟು ಇನ್ನಿತರ ಕಾರ್ಯಗಳನ್ನೇನೂ ಮಾಡದೆ ಹರತಾಳವನ್ನು ಆಚರಿಸಲಾಯಿತು. ಈ ಭರಿಸಲಾರದ ದುಃಖವನ್ನು ಅನುಭವಿಸುತ್ತಿರುವಾಗ ಕೆಲವು ಕಡೆ ನಾಥೂರಾಮ್ ಗೋಡ್ಸೆ ಪಂಥಾನುಯಾಯಿಗಳು-ಸಂಘಪರಿವಾರ ಎಂದು ಕುಖ್ಯಾತವಾದ ಜನಸಮುದಾಯ-ಗಾಂಧಿ ಹತ್ಯೆಯಿಂದ ಖುಷಿಪಟ್ಟು ಸಿಹಿ ಹಂಚಿದ್ದನ್ನು ದಕ್ಷಿಣ ಭಾರತದಲ್ಲೂ ನಾವು ಕಣ್ಣಾರೆ ಕಂಡವು!! ಪುಣೆ, ಕೊಲ್ಲಾಪುರ, ಸಾಂಗ್ಲಿ, ಮುಂಬೈ ಮುಂತಾದ ಕಡೆ ರೊಚ್ಚಿಗೆದ್ದ ಜನ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಕಾರ್ಯಾಲಯಗಳ ಮೇಲೆ ದಾಳಿ ನಡೆಸಿದ್ದೂ ಸುದ್ದಿ ಆಯಿತು.
ಈ ದೇಶದಲ್ಲಿ ಬಾಪೂಜೆಯ ಕೊಲೆಯಿಂದ ದುಃಖತಪ್ತರಾಗಿ ಜನ ರೋದಿಸುತ್ತಿರುವಾಗ ವಿದೇಶದಿಂದ ಶೋಕ ಸಂದೇಶಗಳ ಮಹಾಪೂರವೇ ಹರಿದುಬಂದಿತು. ಜಗದ್ವಿಖ್ಯಾತ ವಿಜ್ಞಾನಿ ಐನ್‌ಸ್ಟೈನ್ ”ರಕ್ತ ಮಾಂಸದಿಂದ ಕೂಡಿದ ಇಂಥ ಒಬ್ಬ ಮನುಷ್ಯ ಈ ಪೃಥ್ವಿಯ ಮೇಲೆ ನಡೆದಾಡಿದನೆಂಬುದನ್ನು ಮುಂಬರುವ ಪೀಳಿಗೆಗಳು ನಂಬುವುದು ಬಹು ವಿರಳ” ಎಂಬುದಾಗಿ ಹೇಳಿದರು.
ಗುರುದೇವ ರವೀಂದ್ರನಾಥ ಠಾಕೂರರು ಬಹು ವರ್ಷಗಳ ಹಿಂದೆ ಗಾಂಧೀಜಿಯ ಎಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ: ”ಗತಿಯಿಲ್ಲದ ಸಹಸ್ರಾರು ಜನರ ಗುಡಿಸಲಿನ ಬಾಗಿಲ ಮುಂದೆ ಗಾಂಧೀಜಿ ನಿಂತರು. ಅವರಂತೆ ಉಡುಗೆ ತೊಟ್ಟರು. ಅವರ ಭಾಷೆಯಲ್ಲಿ ಅವರಿಗೆ ಅರ್ಥವಾಗುವ ಮಾತಿನಲ್ಲಿ ಮಾತನಾಡಿಸಿದರು. ಅವರು ಸಜೀವ ಸತ್ಯವಾಗಿದ್ದರು. ಆದ್ದರಿಂದಲೇ ಈ ದೇಶದ ಜನ ಅವರನ್ನು ‘ಮಹಾತ್ಮಾ’ ಎಂದು ಕರೆದರು. ಸಮಸ್ತ ಭಾರತೀಯರೂ ತಮ್ಮ ರಕ್ತಮಾಂಸವೆಂದು ಅವರಂತೆ ಭಾವಿಸುವವರು ಬೇರೊಬ್ಬರಿಲ್ಲ” ಎಂದಿದ್ದರು.
ತಮ್ಮ ಚಕ್ರಾಧಿಪತ್ಯವನ್ನು ಕೊನೆಗೊಳಿಸಿದ ಗಾಂಧಿ ನಿಧನಕ್ಕೆ ಚಕ್ರವರ್ತಿ ಆರನೇ ಜಾರ್ಜ್, ಬ್ರಿಟಿಷ್ ಮುಖ್ಯಮಂತ್ರಿ ಕ್ಲಮೆಂಟ್ ಆಟ್ಲಿ ಗಾಂಧೀಜಿಯ ಪರಮ ಶತ್ರು ವಿನ್‌ಸ್ಟನ್ ಚರ್ಚಿಲ್, ಸರ್ ಸ್ಟಾಫರ್ಡ್ ಕ್ರಿಪ್ಸ್, ಕ್ಯಾಂಟರ್ ಬರಿ ಬಿಷಪ್ ಮುಂತಾದ ಸಹಸ್ರಾರು ಪ್ರಮುಖರು ಶೋಕ ಸಂತಾಪಕ ಸಂದೇಶಗಳನ್ನು ಕಳಿಸಿದರು. ವಾಶಿಂಗ್ಟನ್‌ನಿಂದ ಅಧ್ಯಕ್ಷ ಹ್ಯಾರಿ ಟ್ರೂಮನ್, ದಕ್ಷಿಣ ಆಫ್ರಿಕಾದಿಂದ ಫೀಲ್ಡ್ ಮಾರ್ಷಲ್ ಸ್ಮಟ್ಸ್ ಗಾಂಧೀಜಿಯನ್ನು ”ನಮ್ಮ್‌ಡನಿದ್ದ ಒಬ್ಬ ಅಸಾಮಾನ್ಯ ಮನುಷ್ಯ ಕಾಣೆಯಾದರು” ಎಂದು ಗೌರವ ಅರ್ಪಿಸಿದರು.
ಇದು ಜಗದ್ವಿಖ್ಯಾತರ ಮಾತಾಯಿತು. ಆದರೆ ಪಾಕಿಸ್ತಾನದ ಸರ್ವಸಾಮಾನ್ಯರು, ಸ್ತ್ರೀಯರು ಗಾಂಧೀಜಿಯ ಹತ್ಯೆಯ ಸುದ್ದಿ ಕೇಳಿ ತಮ್ಮ ಆಭರಣಗಳನ್ನು ಬೆಲೆಬಾಳುವ ಅಲಂಕರಣಗಳನ್ನು ಕಳಚಿ ಹಾಕಿದರು!! ಇದಕ್ಕಿಂತ ಅರ್ಥಪೂರ್ಣವಾದ ದುಃಖ ಸೂಚನೆಯನ್ನು ಯಾರೂ ಎಂದಿಗೂ ಮಾಡಿರಲಾರರು. ಅಂತಹ ಮಹಿಳೆಯರ ಮನಸೂರೆಗೊಂಡ ಮತ್ತೊಬ್ಬ ಮಹಾನುಭಾವ ಜನಿಸಿಲ್ಲ! ಭಾರತೀಯ ಸ್ತ್ರೀಯರು ಅದರಲ್ಲೂ ಬಡ ಹೆಂಗಸರು ದುಃಖ ಭರಿಸಲಾರದೆ ತಲೆಗೂದಲನ್ನು ಹರಿದುಕೊಂಡು ಕಣ್ಣು ಕಿತ್ತ ಕರಡಿಯಂತೆ ಗೋಳಾಡಿದರು.
ಏನು ಮಾಡಿದರೂ ಆ ಕಡುಪಾಪಿ ಕೊನೆಗಾಣಿಸಿದ ಅಪರೂಪದ ಜೀವ ಮತ್ತೆ ಬಂದೀತೆ? ಲಕ್ಷೋಪಲಕ್ಷ ಜನರು ಶುಕ್ರವಾರ ರಾತ್ರಿ ಮರುದಿನ ಶನಿವಾರ ಕಳೇಬರದ ದರ್ಶನ ಮಾಡಿದರು ! ತೀರಿದ 24 ತಾಸುಗಳ ಒಳಗಾಗಿ ಅವರ ಅಂತ್ಯಕ್ರಿಯೆ ಮಾಡಿ ಮುಗಿಸಬೇಕೆಂದು ಇಚ್ಛಿಸಿದ್ದ ಪ್ರಕಾರವೇ ಮರುದಿನ ಮಧ್ಯಾಹ್ನ ಅಂತ್ಯಯಾತ್ರೆ ದಿಲ್ಲಿಯ ರಾಜಘಾಟ್‌ಗೆ ಹೊರಟಿತು. ಐದು ಮೈಲುಗಳು ಕ್ರಮಿಸಲು ಐದು ಗಂಟೆ ಹಿಡಿಯಿತು. ಬಿರ್ಲಾ ಭವನದಿಂದ ರಾಜಘಾಟಿನವರೆಗೆ ಬೀದಿಯ ಇಕ್ಕೆಲಗಳಲ್ಲಿ ಮನೆಗಳ ಮಾಳಿಗೆ ಮೇಲೆ, ಲಾಂದ್ರ ಕಂಬದ ಮೇಲೆ, ಮರಗಳ ಮೇಲೆ, ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಲಕ್ಷೋಪಲಕ್ಷ ಜನ ತಮ್ಮನ್ನು ಉದ್ಧರಿಸಲು ಹೆಣಗಿದ ಬಡವರ ಬಂಧು, ಅಸ್ಪೃಶ್ಯರ ತಂದೆ, ದೀನ ದಲಿತರ ಮಾರ್ಗದರ್ಶಕನ ಕಳೇಬರದ ಅಂತ್ಯದರ್ಶನ ಪಡೆದರು. ಅಂದಿನ ಪತ್ರಿಕೆಗಳು ವರದಿ ಮಾಡಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಯಾರದೇ ಅಂತ್ಯಯಾತ್ರೆಯಲ್ಲಿ ಇಷ್ಟೊಂದು ಲಕ್ಟೋಪಲಕ್ಷ ಜನ ಎಂದೂ ಸೇರಿರಲಿಲ್ಲವಂತೆ!!
ಅಲ್ಲಿ ಶವಸಂಸ್ಕಾರ ನಡೆಯುವ ರಾಜಘಾಟಿನಲ್ಲಿ ಆಗಲೇ ಮತ್ತೆ ಲಕ್ಷೋಪಲಕ್ಷ ಜನ ದಿಲ್ಲಿ, ಹರ್ಯಾಣ (ಆಗ ಅದು ಪಂಜಾಬಿನ ಒಂದು ಭಾಗವಾಗಿತ್ತು), ದಿಲ್ಲಿಯ ಸರಹದ್ದಿನಲ್ಲಿರುವ ಉತ್ತರ ಪ್ರದೇಶದ ಹಳ್ಳಿಗಳಿಂದ ಜನ ನಡೆದುಕೊಂಡು, ಸೈಕಲ್ ಮೇಲೆ, ಬಸ್ಸು, ಟ್ರಕ್ಕು, ಲಾರಿ, ಬೈಕ್‌ಗಳ ಮೇಲೆ ಬಂದರು. ಮತ್ತೆ ಎಷ್ಟೋ ಲಕ್ಷ ಜನ ಅಂತ್ಯದರ್ಶನಕ್ಕಾಗಿ ಸೇರಿದರು!
ದೇಶ ವಿದೇಶಗಳಿಂದ-ಅದರಲ್ಲೂ ಇಂಗ್ಲೆಂಡ್, ಅಮೆರಿಕ, ಚೀನಾ, ಜಪಾನ್, ಬರ್ಮಾ, ಇಂಡೋನೇಶ್ಯ, ಆಫ್ರಿಕಾ ದೇಶಗಳ ಪ್ರತಿನಿಧಿಗಳು ಬಂದು ಸೇರಿದರು. ಆ ಮಹಾ ಜನಸ್ತೋಮವನ್ನು ನಿಯಂತ್ರಿಸಲು ಬೃಹತ್ ಪೊಲೀಸ್ ಪಡೆ, ಸಾವಿರಾರು ಸೈನಿಕರು ಸಮವಸ್ತ್ರದಲ್ಲಿ ಸನ್ನದ್ಧರಾಗಿ ನಿಂತಿದ್ದರು. ಅಂದಿನ ಗವರ್ನರ್ ಜನರಲ್ ಲೂಯಿ ಮೌಂಟ್ ಅವರ ಮಡದಿ ಎಡ್ರಿನಾ ಮೌಂಟ್ ಬ್ಯಾಟನ್ ರಾಜಧಾನಿಯಲ್ಲಿದ್ದ ವಿದೇಶೀ ರಾಯಭಾರಿಗಳು, ಬಂದಿದ್ದ ಪ್ರತಿನಿಧಿಗಳು ಚಿತಾಮಂಚದ ಸುತ್ತ 20 ಗಜ ದೂರದಲ್ಲಿ ನೆಲದ ಮೇಲೆ ಕುಳಿತಿದ್ದರು!
ನಿಗದಿಪಡಿಸಿದ್ದ ಸಮಯಕ್ಕೆ ಸರಿಯಾಗಿ ಕಳೇಬರವನ್ನು ಗಂಧದ ಕೊರಡುಗಳ ಮೇಲೆ ಮಲಗಿಸಲಾಯಿತು. ಶವದ ಮೇಲೆ ಮತ್ತೆ ಗಂಧದ ಕೊರಡುಗಳನ್ನು ಒಟ್ಟಲಾಯಿತು. ಹತ್ಯೆಯಾದ ಇಪ್ಪತ್ತನಾಲ್ಕು ಗಂಟೆಯವರೆಗೆ ಅದೇ ಪ್ರಶಾಂತ ಮುಖಮುದ್ರೆ ಚಿತಾಗ್ನಿಯಿಂದ ಕಣ್ಮರೆಯಾಯಿತು. ಹಿರಿಯ ಮಗ ಹರಿಲಾಲ್ ಇಲ್ಲದಿದ್ದರಿಂದ ಎರಡನೇ ಮಗ ರಾಮದಾಸ್ ಮತ್ತು ಅವರ ತಮ್ಮ ದೇವದಾಸ್ ಗಾಂಧಿ ಚಿತಾಗ್ನಿ ಸ್ಪರ್ಶ ಮಾಡಿದರು! ಅಗಿಜ್ವಾಲೆ ನಭೋಮಂಡಲದತ್ತ ಕೆನ್ನಾಲಿಗೆ ಚಾಚಿ ಮಹಾತ್ಮನ ಕಳೇಬರವನ್ನು ಆಪೋಶನ ತೆಗೆದುಕೊಂಡಿತು. ಸಂಜೆ 6 ಗಂಟೆಗೆ ಕಳೇಬರ ಸಂಪೂರ್ಣ ಭಸ್ಮವಾಯಿತು.
”ಮಹಾತ್ಮಾ ಗಾಂಧಿ ಅಮರ್ ಹೋ” ಎಂದು ಲಕ್ಷೋಪಲಕ್ಷ ದುಃಖತಪ್ತ ಕಂಠಗಳು ಘೋಷಿಸಿದವು! ದೇಹ ಭಸ್ಮವಾದರೂ ಅವರ ಸಂದೇಶ ಅಮರವಾಯಿತು. ಅವರು ನೀಡಿದ ಪರಮತ ಸಹಿಷ್ಣುತೆ, ಹಿಂದೂ-ಮುಸ್ಲಿಂ ಐಕಮತ್ಯ, ಕೋಮುಸೌಹಾರ್ದ, ಪ್ರೇಮ, ಸತ್ಯ ಅಹಿಂಸೆಯ ಸಂದೇಶ ಇಂದಿಗೂ ಪ್ರಸ್ತುತ. ಇಂದಿಗೂ ಪ್ರಜ್ವಲ,
ಫೆಬ್ರವರಿ 1ನೇ ತಾರೀಕು ಚಿತಾಭಸ್ಮವನ್ನು ತಾಮ್ರದ ಬಿಂದಿಗೆಯೊಂದರಲ್ಲಿ ತುಂಬಿಕೊಂಡು ತಂದು ಬಿರ್ಲಾ ಭವನದಲ್ಲಿ ಹೂಮಾಲೆಗಳಿಂದ ಅಲಂಕರಿಸಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ಆ ಸಂಜೆ ರಾಜಘಾಟಿನಲ್ಲಿಯೇ ಪ್ರಾರ್ಥನಾ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಆ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿಯ ಅತ್ಯಂತ ನಿಷ್ಠಾವಂತ ಅನುಯಾಯಿ ಖ್ವಾಜಾ ಅಬ್ದುಲ್ ಮಜೀದ್ ಕುರ್‌ಆನ್ ಪಠಿಸಿದರು:
”ಓ ದೈವವನ್ನು ನಂಬುವ ನೀನು ತಾಳ್ಮೆಯಿಂದ ಧೃತಿಗೆಡದೆ ದೇವರ ಸಹಾಯವನ್ನು ಬೇಡು, ದೇವರ ಸೇವೆಯಲ್ಲಿ ಮಡಿದವರು ಸತ್ತರೆಂದು ತಿಳಿಯಬೇಡ. ಅದನ್ನು ನೀನು ಅರಿಯದಿದ್ದರೂ ಅವರು ಬದುಕಿಯೇ ಇದ್ದಾರೆ. ದೇವರ ಅಪ್ಪಣೆಯಂತೆ ಪೂರ್ವನಿರ್ಧಾರಿತ ಸಮಯಕ್ಕೆ ಸರಿಯಾಗಿ ಸಾಯುವರಲ್ಲದೆ ಬೇರೆ ಸಾಧ್ಯವಿಲ್ಲ…”
ಗಾಂಧೀಜಿಯ ಚಿತಾಭಸ್ಮವನ್ನು ವಿಶೇಷ ಉಗಿಬಂಡಿಯಲ್ಲಿ ದಿಲ್ಲಿಯಿಂದ ತ್ರಿವೇಣಿ ಸಂಗಮಕ್ಕೆ ಕೊಂಡೊಯ್ಯಲಾಯಿತು. ಅಲಹಾಬಾದ್‌ಗೆ ತಲುಪುವ ದಾರಿಯಲ್ಲಿ ಪ್ರತಿ ರೈಲ್ವೆ ನಿಲ್ದಾಣದಲ್ಲೂ ದುಃಖತಪ್ತ ಜನರು ಭಸ್ಮ ತುಂಬಿದ ಕಲಶದ ದರ್ಶನ ಮಾಡಿದರು. ಎಷ್ಟೋ ಜನ ದುಃಖ ತಾಳಲಾರದೆ ಉಗಿಬಂಡಿಗೆ ಹಣೆ ಹಣೆ ಗಟ್ಟಿಸಿ ಅತ್ತರು ! ಕೊನೆಗೆ ಗಂಗ-ಯಮುನಾ ಸರಸ್ವತಿ-ನದಿಗಳ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು. ಚಿತಾಭಸ್ಮದ ಒಂದಿಷ್ಟು ಭಾಗವನ್ನು ಕರ್ನಾಟಕಕ್ಕೂ ತಂದು ತುಂಗಭದ್ರ, ಕಾವೇರಿಯಲ್ಲಿ ವಿಸರ್ಜನೆ ಮಾಡಿದರು. ಇಂದಿಗೂ ಕೆಲವು ಕಡೆ ಅವರ ಅಸ್ಥಿಯ ಅವಶೇಷಗಳನ್ನು ಅಲ್ಲಲ್ಲಿ ಕಾದಿಟ್ಟು ಗೌರವ ಸಲ್ಲಿಸಲಾಗುತ್ತಿದೆ.