ಬೆಳಗಾವಿ: ಕೋವಿಡ್ 3ನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ 882 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಔಷಧಿಗಳೂ ಲಭ್ಯ ಇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಜ.1ರಿಂದ ಆರಂಭವಾದ ಅಲೆ ವೇಗವಾಗಿ ಹರಡುತ್ತಿದೆ. ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 1,05,233 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 6,383 ಮಂದಿಗೆ ಕೋವಿಡ್ ದೃಢಪಟ್ಟದೆ. 1,543 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. 7 ಮಂದಿ ಮೃತರಾಗಿದ್ದಾರೆ. 4,593 ಹೋಂ ಐಸೊಲೇಷನ್‌ನಲ್ಲಿದ್ದಾರೆ. 240 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.