ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ಮತಾಂತರದ ಬಗ್ಗೆ ಆಡಳಿತ ಮತ್ತು ವಿಪಕ್ಷಗಳಿಂದ ಬಿಸಿ ಬಿಸಿ ಚರ್ಚೆ ನಡೆಯುತ್ತಿರೋ ಸಂದರ್ಭದಲ್ಲಿಯೇ, ಸಿಎಂ ಬೊಮ್ಮಾಯಿ ಸಚಿವ ಸಂಪುಟದಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Gnanendra ) ಸೇರಿದಂತೆ ಐವರು ಸಚಿವರಿಗೆ ಕೋಕ್ ನೀಡಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಬಿಜೆಪಿ ಹೈಕಮಾಂಡ್ ಮೂಲಗಳಿಂದ ಮಾಹಿತಿ ಹೊರಬಿದ್ದಿದ್ದು, ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಬದಲಾವಣೆ ಹೊತ್ತಿನಲ್ಲೇ ಸಚಿವರಿಗೂ ಕೋಕ್ ಸುದ್ದಿ ಹರಿದಾಡುತ್ತಿರುವುದು, ತೀವ್ರ ಕುತೂಹಲ ಮೂಡಿಸಿದೆ.
ಅಂದಹಾಗೇ ಗೃಹಸಚಿವ ಸ್ಥಾನ ವಹಿಸಿಕೊಂಡಾಗಿನಿಂದಲೂ ಅರಗಜ್ಞಾನೇಂದ್ರ ಅವರು ತಮಗೆ ಭಾರ ಎಂಬಂತೆ ಸಚಿವ ಸ್ಥಾನದ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೇ ಅನೇಕ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ತಡೆಗಟ್ಟೋ ಸಂದರ್ಭದಲ್ಲಿ ದಿಟ್ಟ ನಿರ್ಧಾರ ಕೈಗೊಂಡಿಲ್ಲ ಎನ್ನೋ ಮಾತು ಕೂಡ ಅವರ ಬಗ್ಗೆ ಕೇಳಿ ಬಂದಿದೆ.
ಈ ಎಲ್ಲಾ ಕಾರಣದಿಂದಾಗಿ ಬಿಜೆಪಿ ಹೈಕಮಾಂಡ್ ( BJP High Command ) ಗೃಹ ಸಚಿವ ಅರಗಜ್ಞಾನೇಂದ್ರ ಸೇರಿದಂತೆ ಐವರು ಸಚಿವರಿಗೆ ಬೊಮ್ಮಾಯಿ ಸಚಿವ ಸಂಪುಟದಿಂದ ಕೋಕ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಖಚಿತ ಮಾಹಿತಿ ದೊರೆಯಬೇಕಿದೆ.