ಬೆಳಗಾವಿ: ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಊಟದ ಸಂದರ್ಭದಲ್ಲಿ ಪೌಷ್ಟಿಕ ಆಹಾರವಾಗಿ ಮೊಟ್ಟೆ ನೀಡುವಂತೆ ಸರಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ತತ್‌ಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು ಮಂಗಳವಾರ ಬೆಳಗಾವಿಯಲ್ಲಿ ಜೈನ ಯುವ ಸಂಘಟನೆಯ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಲಾಯಿತು.
ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಜೈನ ಯುವ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕರ್ನಾಟಕ ಸರಕಾರ ಇತ್ತಿಚಿಗೆ ಸರಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಪೌಷ್ಠಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ಆಹಾರವಾಗಿ ನೀಡುವಂತೆ ಆದೇಶ ಹೊರಡಿಸಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಎಲ್ಲ ಧರ್ಮ, ಜಾತಿ , ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಇದರಲ್ಲಿ ಜೈನ ವಿದ್ಯಾರ್ಥಿಗಳು ಸಹ ಸೇರಿದಂತೆ ಇನ್ನಿತರ ಸಂಪೂರ್ಣ ಸಸ್ಯಹಾರಿ ಸೇವನೆ ಮಾಡುವ ಸಮಾಜದ ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ತಮಗೆ ತಿಳಿದಿರುವಂತೆ ಜೈನ ಧರ್ಮ ಅಹಿಂಸಾ ತತ್ವಗಳನ್ನು ಪಾಲಿಸುವ ಧರ್ಮವಾಗಿದ್ದು, ಮೊಟ್ಟೆ ಸೇವನೆ ಧರ್ಮದ ವಿರುದ್ದವಾಗಿ ನಡೆದಂತಾಗುತ್ತದೆ.