Breaking News

ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಪಾತಕಿ ಕಾಲಿಗೆ ಗುಂಡಿನ ದಾಳಿ

Spread the love

ಬೆಂಗಳೂರು, ನ. 16: ರಾಜಧಾನಿಯಲ್ಲಿ ಪಾತಕಿಗಳ ಸದ್ದು ಅಡಗಿಸಲು ಬೆಂಗಳೂರು ಪೊಲೀಸರ ಬುಲೆಟ್ ಸದ್ದು ಮಾಡಿವೆ. ಗಾರ್ಮೆಂಟ್ ಉದ್ಯಮಿಯನ್ನು ಕೊಲೆ ಮಾಡಿದ್ದ ಪ್ರಮುಖ ಆರೋಪಿಯ ಕಾಲಿಗೆ ಗುಂಡು ಹೊಡೆದು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ರಘು ಪೊಲೀಸರಿಂದ ಗುಂಡೇಟು ತಿಂದ ಆರೋಪಿ.

ರಾಮಮೂರ್ತಿನಗರದ ಹೆಣ್ಣೂರು ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಗಾಯಾಳು ರಘುನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಏನಿದು ಘಟನೆ:

ಕಳೆದ ನ. 14 ರಂದು ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಹೆಣ್ಣೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ರಘುನನ್ನು ಮಹಜರು ನಡೆಸಲು ಇಂದು ಬೆಳಗಿನ ಜಾವ ಕರೆದೊಯ್ದಿದ್ದರು. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಅರೋಪಿಯನ್ನು ಕರೆದೊಯ್ಯುತ್ತಿದ್ದ ಪಿಎಸ್‌ಐ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪೊಲೀಸ್ ಇನ್‌ಸ್ಪೆಕ್ಟರ್ ವಸಂತ್ ಗುಂಡು ಹಾರಿಸಿದ್ದು, ರಘು ಕಾಲಿಗೆ ಬಿದ್ದಿದೆ. ಗಾಯಾಳು ರಘುನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೂರ್ವ ವಿಭಾಗದ ಡಿಸಿಪಿ. ಶರಣಪ್ಪ, ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವರನ್ನು ಕೊಲೆ ಮಾಡಿದ್ದ ಆರೋಪಿ ರಘು ಕೃತ್ಯಕ್ಕೆ ಬಳಿಸಿದ್ದ ಆಯುಧಗಳನ್ನು ಜಪ್ತಿ ಮಾಡಲು ಕರೆದೊಯ್ದಾಗ ಪಿಎಸ್‌ಐ ಲಿಂಗರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ಆತ್ಮ ರಕ್ಷಣೆಗಾಗಿ ಪೊಲೀಸ್ ಇನ್‌ಸ್ಪೆಕ್ಟರ್ ವಸಂತ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಸಹ ಹಲ್ಲೆಗೆ ಮುಂದಾದ ರಘು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಶ್ರೀಧರ್ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಉದ್ಯಮಿ ಶ್ರೀಧರ್‌ನನ್ನು ರಘು ಮತ್ತು ಆತನ ಸಹಚರರು ನಾಗವಾರ ರಿಂಗ್ ರೋಡ್ ನಲ್ಲಿ ನ. 14 ರಂದು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ತನಿಖೆ ನಡೆಸಿದ ಹೆಣ್ಣೂರು ಪೊಲೀಸರು ಮಹೇಶ್, ಹರೀಶ್, ಸುಜಿತ್, ಪ್ರಭು, ನೆಲ್ಸನ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ರಘು ಆಗಿದ್ದು, ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿ ಗುಂಡೇಟು ತಿಂದಿದ್ದಾನೆ.

ಸಿಸಿಬಿ ಪೊಲೀಸರಿಂದ ಡಕಾಯಿತರ ಸೆರೆ:

ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಂದ್ರಾ ಲೇಔಟ್ ಸಮೀಪದ ನಾಯಂಡಹಳ್ಳಿ ವೃತ್ತದ ಬಳಿ ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ಡಕಾಯಿತಿ ಮಾಡುತ್ತಿದ್ದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಐವರು ತಲೆ ಮರೆಸಿಕೊಂಡಿದ್ದಾರೆ. ಬಂಧಿತ ಮೂವರಿಂದ 25 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಚಾಕು, ಡ್ರಾಗರ್ ಮತ್ತಿತರ ಮಾಕರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಂದ್ರಾಲೇಔಟ್, ಮೂಡಲಪಾಳ್ಯ, ನಾಯಂಡಹಳ್ಳಿ ಸಮೀಪ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರುತಿಸುತ್ತಿದ್ದರು. ಅವರನ್ನು ಅಡ್ಡಗಟ್ಟಿ ಡಕಾಯಿತಿ ಮಾಡುತ್ತಿದ್ದರು. ಸುಮಾರು ಸಾರ್ವಜನಿಕರಿಗೆ ಭೀತಿ ಹುಟ್ಟಿಸುತ್ತಿದ್ದರು. ಈ ಬಗ್ಗೆ ಅನೇಕ ದೂರುಗಳು ದಾಖಲಾಗಿದ್ದವು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ