ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಇಂದು ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾನಗಲ್ನಲ್ಲಿ ಕಾಂಗ್ರೆಸ್ಗೆ ಲಭಿಸಿದ ಜಯ 2023ರ ಮಹಾಚುನಾವಣೆಯ ಗೆಲುವಿನ ಪ್ರಾರಂಭವಾಗಿದೆ ಎಂದಿದ್ದಾರೆ.
‘ಕತ್ತಲೆಯಿಂದ ಬೆಳಕಿನಡೆಗೆ ಸಾಗೋಣ. ಇಷ್ಟು ದಿನ ರಾಜ್ಯ ಕತ್ತಲೆಯಲ್ಲಿ ಇತ್ತು. ಮಾನೆಗೆ ಆಶೀರ್ವಾದ ಮಾಡಿದ್ದೀರಿ. ಬೆಳಕು ಬಂದಿದೆ. ಅದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸೋಕೆ ಬಂದೆ. ಇದು ಪ್ರಾರಂಭ. 2023 ರ ಪ್ರಾರಂಭ’ ಎಂದು ಶಿವಕುಮಾರ್ ಹೇಳಿದರು. ‘ಮಾನೆಯನ್ನು ನೀವು ಗೆಲ್ಲಿಸಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ಅದೇ ರೀತಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಇಲ್ಲಿಯೂ ಗೆಲ್ಲಿಸಿ. ಇದು ನಮ್ಮೆಲ್ಲರ ಸಂಕಲ್ಪ’ ಎಂದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಡಿಕೆಶಿ ಕರೆ ನೀಡಿದರು.
ಜೊತೆಗೇ, ‘ಹಣ, ಅಧಿಕಾರಕ್ಕೆ ಬಗ್ಗದೇ ಶ್ರೀನಿವಾಸ ಮಾನೆಯವರನ್ನು ಗೆಲ್ಲಿಸಿದ್ದೀರಿ. ಶಿಗ್ಗಾವಿಯ ಕಾರ್ಯಕರ್ತರು ಹಾನಗಲ್ಗೆ ಬಂದು ಕೆಲಸ ಮಾಡಿದ್ದೀರಿ. ನಿಮಗೆಲ್ಲಾ ಧನ್ಯವಾದ’ ಎಂದ ಡಿಕೆಶಿ, ಬಿಜೆಪಿ ಮತ್ತು ಸಿಎಂ ಬೊಮ್ಮಾಯಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.