ಬೆಂಗಳೂರು: ಎರಡು ದಿನಗಳ ಹಿಂದೆ ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ ಮೂಟೆಯಲ್ಲಿ ಕಂಡುಬಂದಿದ್ದ ವಿದ್ಯಾರ್ಥಿ ತರುಣ್ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತರುಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಪೊಲೀಸರು ನಾಸಿರ್ ಹಾಗೂ ಸೈಯದ್ ತಜ್ಮುಲ್ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಬ್ಬರೂ ಸಹೋದರರು, ತರುಣ್‌ಗೆ ಗೆಳೆಯರಾಗಿದ್ದವರು.
ಭಾರತೀನಗರ ಮುರುಗಪಿಳ್ಳೈ ನಿವಾಸಿ ತರುಣ್ (20) ತಂದೆ ಮಣಿಯವರಿಂದ 2 ಸಾವಿರ ರೂಪಾಯಿ ಪಡೆದುಕೊಂಡು ಪಟಾಕಿ ತರುವುದಾಗಿ ಹೇಳಿ ನ. 1ರಂದು ಹೊರಹೋಗಿದ್ದ. ರಾತ್ರಿಯಾದರೂ ಮರಳದ್ದರಿಂದ ಬಳಿಕ ಭಾರತೀನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಮಂಗಳವಾರ ರಾಜರಾಜೇಶ್ವರಿ ನಗರ ರಾಜಾಕಾಲುವೆ ಬಳಿ ಕಂಡುಬಂದ ಮೂಟೆಯಲ್ಲಿ ಅಪರಿಚಿತ ಶವ ಇರುವುದು ತಿಳಿದುಬಂದಿತ್ತು. ಪೊಲೀಸರು ತನಿಖೆ ನಡೆಸಿದಾಗ ಅದು ತರುಣ್ ಶವ ಎಂಬುದು ದೃಢಪಟ್ಟಿತ್ತು.