ಬೆಂಗಳೂರು : ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಿ ಕುಮಾರ್ ನಾಯಕ್ ಆದೇಶ ಹೊರಡಿಸಿದ್ದು, 10 ನೇ ತರಗತಿ ಪೂರ್ಣಗೊಳಿಸಿದ ನಂತರ ರಾಜ್ಯದ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯ ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಪದ್ದತಿಯನ್ನು 2021-22 ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ಶಿಷ್ಯ ವೇತನದ ಹಣದ ಮೊತ್ತವನ್ನು ಶಿಷ್ಯವೇತನ ರೂಪದಲ್ಲಿ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಆದೇಶ ಹೊರಡಿಸಿದ್ದಾರೆ.
ಮುಂದುವರೆದು , ಶಿಷ್ಯ ವೇತನವನ್ನು ರಾಜ್ಯದ ಎಲ್ಲಾ ವರ್ಗದ ರೈತರ ಮಕ್ಕಳು ರಾಜ್ಯದ ಇತರೆ ಯಾವುದೇ ಶಿಷ್ಯ ವೇತನವನ್ನು ಪಡೆಯಲು ಆಗದಿದ್ದಲ್ಲಿ, ರೈತರ ಮಕ್ಕಳ ಶಿಷ್ಯ ವೇತನಕ್ಕೆ https://ssp.postmatric.karnataka.gov.in ಪೋರ್ಟಲ್ ಮುಖಾಂತರ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಕಾಲೇಜು/ವಿವಿ/ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಸೂಚನೆಗಳು
1) ರೈತರ ಮಕ್ಕಳು ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯ ವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ.
2) ರೈತರ ಮಕ್ಕಳ ತಂದೆ ತಾಯಿ ಇಬ್ಬರು ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯ ವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ.
3) ಈ ಶಿಷ್ಯ ವೇತನವು ಯಾವುದೇ ಕೋರ್ಸ್ ನ ಸೆಮಿಸ್ಟರ್ / ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು, ಕೋರ್ಸ್ ನ ನೆಮಿಸ್ಟರ್ ನಲ್ಲಿ ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ ಪುನಃ ಆ ಸೆಮಿಸ್ಟರ್ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಪುನಾರಾವರ್ತನೆಯಾದರೆ ( ಪುನಃ ಪರೀಕ್ಷೆ ತೆಗೆದುಕೊಂಡರೆ ) ಆ ವಿದ್ಯಾರ್ಥಿಗಳು ಶಿಷ್ಯ ವೇತನ ಪಡೆಯಲು ಅರ್ಹರಾಗಿರುವುದಿಲ್ಲ.