Breaking News

ಗೂಂಡಾಗಿರಿ ಸಮರ್ಥನೆ ವಿರೋಧಿಸಿ ಪ್ರತಿಭಟನೆ

Spread the love

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿರುವುದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ‌ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಕಾರರು, ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮಂಗಳೂರಿನ ಮತೀಯ ಗೂಂಡಾಗಿರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ಮಾತನಾಡಿ, ‘ಯುವಕ-ಯುವತಿಯರು ಒಂದು ಐಸ್ ಕ್ರೀಂ ತಿನ್ನಲು ಸಾಧ್ಯವಾಗದ ಸ್ಥಿತಿ ಇದೆ. ಅದರಲ್ಲಿಯೂ ಜಾತಿ-ಧರ್ಮ ಹುಡುಕಲಾಗುತ್ತಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಗೂಂಡಾಗಳ ಕಿರುಕುಳದಿಂದ ಯುವಕ- ಯುವತಿಯರು ತಮ್ಮ ಇಷ್ಟದಂತೆ ಸ್ನೇಹ ಮಾಡುವಂತಿಲ್ಲ. ತಮಗಿಷ್ಟ ಆದವರನ್ನು ಪ್ರೀತಿ ಮಾಡುವ ಹಕ್ಕು ಕೂಡ ಇಲ್ಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹ ಅಗತ್ಯ ಎಂದು ಅಂಬೇಡ್ಕರ್‌ ಹೇಳಿದ್ದರು. ಆದರೆ, ಇಂದು ಅಂತರ್ಜಾತಿ ಮದುವೆಗೆ ಅಡ್ಡಿಪಡಿಸಲಾಗುತ್ತಿದೆ. ಜನರ ನಡುವೆ ಜಾತಿ ಧರ್ಮದ ಗೋಡೆ ಕಟ್ಟಲಾಗುತ್ತಿದೆ. ಮಹಿಳೆಯರ ಮೇಲೆ ದಾಳಿ ನಡೆಸುವ ಮೂಲಕ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಮಹಿಳೆಯರು ಯಾರೊಂದಿಗೆ ಸ್ನೇಹ ಮಾಡಬೇಕು, ಯಾರೊಂದಿಗೆ ಮದುವೆಯಾಗಬೇಕು ಎಂಬುದನ್ನು ನಿಯಂತ್ರಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಅಂತರ್ಜಾತಿ ವಿವಾಹ ಮತ್ತು ಅಂತರ ಧರ್ಮೀಯ ವಿವಾಹಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು. ಅಂತಹ ವಿವಾಹಿತ ವ್ಯಕ್ತಿಗಳ ವಿರುದ್ಧ ನಡೆಯುವ ಹಿಂಸೆ, ಮರ್ಯಾದೆ ಹತ್ಯೆ ಮತ್ತು ಮತೀಯ ಗೂಂಡಾಗಿರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.‌


Spread the love

About Laxminews 24x7

Check Also

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮೂಲಸೌಕರ್ಯ ಪುನರ್ ನಿರ್ಮಾಣ: 1545.23 ಕೋಟಿ ಅನುದಾನ ಕೋರಿ ಕೇಂದ್ರಕ್ಕೆ ಪತ್ರ

Spread the loveಬೆಂಗಳೂರು: ನೈಋತ್ಯ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಿಂದಾಗಿ ನದಿಗಳ ಪ್ರವಾಹ ಉಂಟಾಗಿ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ 1545.23 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ