ಬೆಂಗಳೂರು: ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಸ್ವಾಮೀಜಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಸ್ವಾಮೀಜಿ, ‘ಮೀಸಲಾತಿಗಾಗಿ ಆಗ್ರಹಿಸಿ ನಡೆಸುವ ಹೋರಾಟ ಕೈಬಿಡುವಂತೆ ಸಿಎಂ ಮನವಿ ಮಾಡಿದ್ದಾರೆ. ಅಲ್ಲದೇ ಮೀಸಲಾತಿ ವಿಚಾರವಾಗಿ ಕೆಲ ಅಂಶಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ’ ಎಂದು ಹೇಳಿದ್ದಾರೆ.
ಇನ್ನು ನಮ್ಮ ಮುಂದಿನ ನಡೆ ಹಾಗೂ ಹೋರಾಟದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಮುದಾಯದ ಮುಖಂಡರ ಜೊತೆ ಮತ್ತೊಮ್ಮೆ ಚರ್ಚೆ ನಡೆಸುತ್ತೇವೆ. ಜನಪ್ರತಿನಿಧಿಗಳು ಏನು ಹೇಳುತ್ತಾರೋ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಭೇಟಿ ವೇಳೆ ಮೀಸಲಾತಿ ಆಗ್ರಹಿಸಿ ಸರ್ಕಾರಕ್ಕೆ ನೀಡಲಾಗಿರುವ ಗಡುವಿನ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸಚಿವ ಸಿ.ಸಿ. ಪಾಟೀಲ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.