Breaking News

ಉಡಾನ್‌ಗೆ ಶಿವಮೊಗ್ಗ ವಿಮಾನ ನಿಲ್ದಾಣ; ಎಲ್ಲೆಲ್ಲಿಗೆ ವಿಮಾನ ಹಾರಾಟ?

Spread the love

ಶಿವಮೊಗ್ಗ, ಸೆಪ್ಟೆಂಬರ್ 23; “ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ 3,200 ಮೀಟರ್ ಅತಿ ಉದ್ದನೆಯ ರನ್‍ವೇ ನಿರ್ಮಾಣವಾಗಲಿದೆ. ಏಪ್ರಿಲ್‍ನಲ್ಲಿ ಕಾಮಗಾರಿ ಪೂರ್ಣಗೊಂಡು ಜೂನ್ ಹೊತ್ತಿಗೆ ವಿಮಾನ ನಿಲ್ದಾಣದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ” ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಜಂಟಿಯಾಗಿ ಆಯೋಜಿಸಿದ್ದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದ ವಾಣಿಜ್ಯ ಸಪ್ತಾಹ ಅಂಗವಾಗಿ ಏರ್ಪಡಿಸಲಾಗಿದ್ದ ಒಂದು ದಿನದ ರಫ್ತುದಾರರ ಸಮಾವೇಶ ಮತ್ತು ರಫ್ತು ಅಭಿವೃದ್ದಿ ಕಾರ್ಯಕ್ರಮದಲ್ಲಿ ಸಂಸದರು ಮಾತನಾಡಿದರು.

“ಉಡಾನ್ ಯೋಜನೆಯಡಿ ಶೇ 50ರ ಸಬ್ಸಿಡಿಯಡಿ ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಮಂಗಳೂರು-ಶಿವಮೊಗ್ಗ, ದೆಹಲಿ-ಶಿವಮೊಗ್ಗ, ಮುಂಬೈ-ಶಿವಮೊಗ್ಗ ಸೇರಿದಂತೆ ಐದು ಮಾರ್ಗಗಳನ್ನು ನೀಡಲಾಗಿದೆ. ಜೊತೆಗೆ ಇತರೆ ವಿಮಾನಗಳಿಗೆ ಸಹ ಅವಕಾಶ ಮಾಡಿಕೊಡಲಾಗಿದೆ” ಎಂದರು.

“ಕೋವಿಡ್ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ದಿಗೆ ಕೊರತೆ ಆಗದಂತೆ ಎಲ್ಲರ ಸಹಕಾರದೊಂದಿಗೆ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ರಸ್ತೆ, ರೈಲು ಮತ್ತು ವಾಯು ಮಾರ್ಗಕ್ಕೆ ಸಂಬಂಧಿಸಿದಂತ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ದಿಯಾಗಿದೆ. ಕೈಗಾರಿಕೋದ್ಯಮಿಗಳು ನಿಮ್ಮದೇನಾದರೂ ಸಲಹೆಗಳಿದ್ದರೆ ತಿಳಿಸಬಹುದು” ಎಂದು ಸಂಸದರು ತಿಳಿಸಿದರು.

 

“ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಆಗಿದ್ದು, ಮೂಲಭೂತ ಸೌರ್ಕರ್ಯ ವೃದ್ದಿ ಉದ್ದೇಶದಿಂದ ಶಿವಮೊಗ್ಗವನ್ನು ಕಾರಿಡಾರ್ ವ್ಯಾಪ್ತಿಗೆ ಸೇರಿಸಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಫ್ತು ಮತ್ತು ಕೈಗಾರಿಕಾಭಿವೃದ್ದಿಗೆ ಅತಿ ಅವಶ್ಯವಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಜಿಲ್ಲೆಯಲ್ಲಿ ಆರಂಭವಾಗಿದೆ” ಎಂದರು.

 

“ಶಿವಮೊಗ್ಗದಲ್ಲಿ ವಿಶೇಷವಾಗಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಬಳಿಕ ಕೈಗಾರಿಕೆಗೆ ಆದ್ಯತೆ ಕೊಡಲಾಗಿದೆ. ಕೈಗಾರಿಕಾ ಇತಿಹಾಸವನ್ನೇ ಹೊಂದಿರುವ ಶಿವಮೊಗ್ಗದಲ್ಲಿ ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಘಟಕಗಳು ಇದ್ದು ಜಿಲ್ಲೆಯಲ್ಲಿ ಒಟ್ಟಾರೆ 20,294 ಕೈಗಾರಿಕೆಗಳು ಘಟಕಗಳು 2646 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಕೆಲಸ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ” ಎಂದು ಸಂಸದರು ಹೇಳಿದರು.

ಬಂದರು ನಿರ್ಮಾಣ : “ಶಿವಮೊಗ್ಗದಿಂದ 80 ರಿಂದ 90 ಕಿ.ಮೀ ದೂರದಲ್ಲಿರುವ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು ಅಲ್ಲಿ ಬಂದರು ನಿರ್ಮಿಸಿ ರಫ್ತು ವಿಶೇಷ ಕ್ರೂಸ್‍ಗಳ ಓಡಾಡಕ್ಕೆ ಅವಕಾಶ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರು ಬಿಟ್ಟರೆ ಬೈಂದೂರಿನಲ್ಲಿ ಮಾತ್ರ ಈ ವ್ಯವಸ್ಥೆ ಇರಲಿದೆ” ಎಂದು ಸಂಸದರು ವಿವರಣೆ ನೀಡಿದರು.

ಕಾರ್ಖಾನೆಗಳ ಪುನರಾರಂಭ; “ಸರ್. ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಂಪೆನಿ, ಎಂಪಿಎಂ ಪೇಪರ್ ಮಿಲ್‍ಗಳನ್ನು ಪುನರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸಾಕಷ್ಟು ಸಭೆಗಳನ್ನು ನಡೆಸಿದ್ದು ನೀತಿ ಆಯೋಗ ಸಹ ವಿಶ್ವೇಶ್ವರಯ್ಯ ಕಬ್ಬಿಣ ಕಾರ್ಖಾನೆ ಪುನರಾರಂಭದ ಕುರಿತು ಧನಾತ್ಮಕ ಸೂಚನೆ ನೀಡಿದ್ದು. ಎಂಪಿಎಂ ಕಾರ್ಖಾನೆ ಪುನರಾರಂಭಕ್ಕೆ ಸಹ ಪ್ರಯತ್ನಿಸಲಾಗುತ್ತಿದೆ” ಎಂದು ಬಿ. ವೈ. ರಾಘವೇಂದ್ರ ಭರವಸೆ ನೀಡಿದರು.

“400 ರಿಂದ 500 ಕೋಟಿ ಅಡಮಾನ ಸಾಲದಿಂದ ಕಾರ್ಖಾನೆ ಹೊರಬರಲು ನಿಕಟಪೂರ್ವ ಮುಖ್ಯಮಂತ್ರಿಗಳು ಶ್ರಮಿಸಿದ್ದಾರೆ. ಕಾರ್ಖಾನೆಗಳು ಸಂಕಷ್ಟದಲ್ಲಿರುವ ಸಮಯದಲ್ಲಿ ಶಿವಮೊಗ್ಗದ ಶಾಹಿ ಕಂಪೆನಿಯವರು ಸುಮಾರು 18 ರಿಂದ 20 ಸಾವಿರ ಉದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆ” ಎಂದರು.

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್ ಮಾತನಾಡಿ, “ನಗರದಲ್ಲಿ ವಿಮಾನ ನಿಲ್ದಾಣ ಇಲ್ಲದ ಕಾರಣ ರಫ್ತಿಗೆ ಉತ್ತೇಜನ ಕಡಿಮೆ ಇತ್ತು. ಆದರೆ ನಮ್ಮ ಕ್ಷೇತ್ರದ ಸಂಸದರ ಕೃಪೆಯಿಂದ ಇನ್ನು 8 ರಿಂದ 10 ತಿಂಗಳಲ್ಲಿ ನಗರದಲ್ಲಿ ಏರ್ ಪೋರ್ಟ್ ಕಾರ್ಯಾರಂಭಗೊಳ್ಳಿಲಿದ್ದು, ಇದರಿಂದ ಕೈಗಾರಿಕಾಭಿವೃದ್ದಿ, ರಫ್ತು ಮತ್ತು ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಚುರುಕು ಪಡೆಯಲಿವೆ” ಎಂದು ಹೇಳಿದರು.

“ಜಿಎಸ್‍ಟಿ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದವು. ಜಿಎಸ್‍ಟಿ ಬಗ್ಗೆ ಅತಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳ ಪಾತ್ರವಿದೆ. ಜಿಎಸ್‍ಟಿ ಅನುಷ್ಟಾನ, ಸಮಸ್ಯೆಗಳು ಮತ್ತು ಈ ಸಮಸ್ಯೆಗಳನ್ನು ಸರಿದೂಗಿಸುವ ಬಗ್ಗೆ ಕೂಡ ಕೆಲಸ ಛೇಂಬರ್ ಆಫ್ ಕಾಮರ್ಸ್‍ನ ಸದಸ್ಯರು ಮಾಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ