ಬೆಂಗಳೂರು: ನಗರದ ಹೊರ ವಲಯದಲ್ಲಿ ರೇವ್ ಪಾರ್ಟಿ ನಡೆದಿರುವುದು ಮತ್ತೆ ಬೆಳಕಿಗೆ ಬಂದಿದ್ದು, ಒಟ್ಟು 20 ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರು ರೆಸಾರ್ಟ್‍ಗೆ ಎಂಟ್ರಿ ಕೊಡುತ್ತಿದ್ದಂತೆ ಯುವಕ, ಯುವತಿಯರು ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಖಾಕಿ ಪಡೆ ಹಿಡಿದಿದೆ. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರದ ಹೊರ ವಲಯದ ಆನೇಕಲ್ ಬಳಿಯ ತಮ್ಮನಾಯಕನಹಳ್ಳಿ ಸಮೀಪವಿರುವ ಹಸಿರು ವ್ಯಾಲ್ಯೂ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ಎಗ್ಗಿಲದೇ ನಡೆಯುತ್ತಿದ್ದು, ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಸೇವಿಸಿ, ತುಂಡುಡುಗೆ ತೊಟ್ಟು ಮಹಿಳೆಯರು ಹುಚ್ಚೆದ್ದು ಕುಣಿದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಆನೇಕಲ್ ಪೊಲೀಸರು, 11 ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಮತ್ತೆ 9 ಜನರನ್ನು ಬಂಧಿಸಿದ್ದು, ಒಟ್ಟು 20 ಜನರನ್ನು ಹೆಡೆಮುರಿ ಕಟ್ಟಿದ್ದಾರೆ. 6 ಕಾರು ಸೇರಿದಂತೆ 15ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.