– ಮುಂಬೈನ ಕಲ್ಯಾಣ್ನಿಂದ ಚೆನ್ನೈಗೆ ಹೋಗುತ್ತಿದ್ದ ಆಂಬುಲೆನ್ಸ್ವೊಂದು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದು ಭೀಕರ ಅಪಘಾತವಾಗಿದೆ. ಈ ದುರಂತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ ನಾಲ್ವರ ಸ್ಥಿತಿ ಗಂಭೀರವಿದೆ.
ಆನೇಕಲ್: ಕಳೆದೊಂದು ತಿಂಗಳಿನಿಂದ ಎಲ್ಲಿ ನೋಡಿದರೂ ಅಪಘಾತಗಳದ್ದೇ ಸುದ್ದಿ. ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಯಮರಾಜ ಬೇಟೆಗೆ ನಿಂತಿರುವಂತಿದೆ. ಮೊನ್ನೆಯಷ್ಟೇ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓರ್ ಮೇಲೆ ಆದ ಅಪಘಾತದಿಂದ ಜನ ಹೊರ ಬಂದಿಲ್ಲ, ಅಷ್ಟರಲ್ಲೇ ಇಂದು ಗುರುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಿಂದ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಪ್ಯಾರಾಲಿಸಿಸ್ ಚಿಕಿತ್ಸೆ ಅಂತ ಮಹಾರಾಷ್ಟ್ರದ ಕಲ್ಯಾಣ್ನಿಂದ ಚೆನೈಗೆ ಹೊರಟಿದ್ದ ಅಂಬುಲೆನ್ಸ್ ಲಾರಿಗೆ ಗುದ್ದಿದೆ (Ambulance Accident at hosur highway Road kills Three). ನಿದ್ರೆ ಮಂಪರಿನಲ್ಲಿದ್ದ ಅಂಬ್ಯುಲೆನ್ಸ್ ಚಾಲಕ ನಿಧಾನವಾಗಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ಡಿಕ್ಕಿಯ ರಭಸಕ್ಕೆ ಅಂಬ್ಯುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರ ಪರಿಣಾಮ ಮೂರು ಜನ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಕೆ ಕೃಷ್ಣವಂಶಿ ಅವರು ತಿಳಿಸಿದ್ದಾರೆ.
ವೃದ್ಧರೊಬ್ಬರ ಚಿಕಿತ್ಸೆಗಾಗಿ ನಿನ್ನೆ ಮುಂಬೈನ ಕಲ್ಯಾಣ್ನಿಂದ ಆಂಬುಲೆನ್ಸ್ ಹೊರಟಿತ್ತು. ಬೆಂಗಳೂರು ದಾಟಿ ಅತ್ತಿಬೆಲೆ ಸಮೀಪದ ನೆರಳೂರು ಬಳಿ ಈ ಆಂಬುಲೆನ್ಸ್ ತನ್ನ ಮುಂದೆ ಸಾಗುತ್ತಿದ್ದ ಲಾರಿಯೊಂದಕ್ಕೆ ಹಿಂಬದಿಯಿಂದ ಗುದ್ದಿದೆ. ಎಡ ಭಾಗದಲ್ಲಿ ನಿಧಾನವಾಗಿಯೇ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಅಂಬ್ಯುಲೆನ್ಸ್ ಗುದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುದ್ದಿದ ರಭಸಕ್ಕೆ ಪ್ಯಾರಲಿಸೀಸ್ ರೋಗಿ 68ವರ್ಷದ ಅನ್ವರ್ ಖಾನ್, ಡಾ. ಜಾಧವ್ ಅಶೋಕ್, ಚಾಲಕ ತುಕಾರಾಮ್ ನಾಮದೇವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಹ್ಮದ್ ರಾಜ್ ಶೇಖ್, ಡಾ. ಜೀತೆಂದ್ರ ಬಿರಾದರ್ ಹಾಗು ಇನ್ನೊಬ್ಬ ಚಾಲಕ ಅಸ್ಕಾನ್ ಮೆನಾನ್ ಹಾಗೂ ಪ್ಯಾರಾಲಿಸಿಸ್ ರೋಗಿ ಅನ್ವರ್ ಖಾನ್ ಸಹೋದರ ಯುಸೂಫ್ ಖಾನ್ ಗಾಯಗೊಂಡಿದ್ದಾರೆ.