ದೆಹಲಿ: ಶತಮಾನದಲ್ಲೇ ಕಂಡು ಕೇಳರಿಯದ ಮಳೆ ನಿನ್ನೆ(ಸೆಪ್ಟೆಂಬರ್ -11) ಒಂದೇ ದಿನ ದೆಹಲಿಯಲ್ಲಿ ಸುರಿದಿದೆ. ಮಹಾ ಮಳೆಯಲ್ಲಿ ಸಿಲುಕಿ ದೆಹಲಿ ತತ್ತರಿಸಿದ್ದು, ಪ್ರತಿಯೊಂದು ಏರಿಯಾದಲ್ಲೂ ಮಳೆ ನೀರು ತುಂಬಿ ಹೋಗಿತ್ತು. ಇನ್ನು ದೆಹಲಿ ರಸ್ತೆಗಳು ನದಿಯಂತಾಗಿದ್ದು, ಸವಾರರು ಪರದಾಡಿದ್ರು. ಈ ಮಧ್ಯೆ ಇವತ್ತು ಕೂಡ ಭಾರಿ ಮಳೆಯಾಗುವ ಎಚ್ಚರಿಕೆ ನೀಡ್ಲಾಗಿದೆ.
ನಿನ್ನೆ ಸುರಿದ ಮಹಾ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ದೆಹಲಿ ಹೃದಯ ಭಾಗವೂ ಸೇರಿದಂತೆ ರಾಷ್ಟ್ರ ರಾಜಧಾನಿಯ ಹೊರ ವಲಯದಲ್ಲಿ ಭಾರಿ ಮಳೆ ಬಿದ್ದಿದೆ. ನಿನ್ನೆ ಬೆಳಿಗ್ಗೆಯಿಂದಲೇ ಶುರು ಆಗಿದ್ದ ಮಳೆ ಎಡಬಿಡದೆ ಸುರಿಯಿತು. ಹೀಗಾಗಿ ಹಲವು ಪ್ರದೇಶಗಳಿಗೆ ನೀರು ನುಗ್ಗಿತ್ತು. ರಸ್ತೆಗಳಲ್ಲಿ ನೀರು ತುಂಬಿದ್ದು, ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
121 ವರ್ಷಗಳಲ್ಲೇ ಅತ್ಯಂತ ಭೀಕರ ಮಳೆ
ಅಷ್ಟಕ್ಕೂ ನಿನ್ನೆ ಸುರಿದ ಮಳೆಯನ್ನು 121 ವರ್ಷಗಳಲ್ಲೇ ದೆಹಲಿ ಮತ್ತೆಂದೂ ಕಂಡಿರಲಿಲ್ಲ. ದೆಹಲಿಯಲ್ಲಿ ಇದೇ ತಿಂಗಳಲ್ಲಿ 390 ಮಿಲಿಮೀಟರ್ ಮಳೆಯಾಗಿದೆ. 1944ರ ಸೆಪ್ಟೆಂಬರ್ ತಿಂಗಳಲ್ಲಿ 417 ಮಿಲಿಮೀಟರ್ ಮಳೆಯಾಗಿತ್ತು ಎನ್ನಲಾಗಿದೆ. ದೆಹಲಿಯಲ್ಲಿ 4 ತಿಂಗಳಲ್ಲಿ 1139 ಮಿಲಿಮೀಟರ್ ಮಳೆಯಾಗಿದೆ, ಇದು 46 ವರ್ಷಗಳಲ್ಲೇ ಅತಿ ಹೆಚ್ಚು. 1975 ರಲ್ಲಿ ಸುಮಾರು 1155 ಮಿಲಿಮೀಟರ್ ಮಳೆಯಾಗಿತ್ತು. ಸಾಮಾನ್ಯವಾಗಿ ಮಳೆಗಾಲದಲ್ಲಿ 648.9 ಮಿಮೀ ಮಳೆ ನಿರೀಕ್ಷೆ ಮಾಡಲಾಗಿತ್ತು, ಆದ್ರೆ ನಿರೀಕ್ಷೆಗೂ ಮೀರಿ ಈ ಬಾರಿ ದೆಹಲಿಯಲ್ಲಿ ಮಳೆ ಸುರಿದಿದೆ.
ದೆಹಲಿ ವಿಮಾನ ನಿಲ್ದಾಣ ಜಲಾವೃತ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲಭಾಗಗಳು ಜಲಾವೃತಗೊಂಡಿವೆ. ವಿಮಾನ ನಿಲ್ದಾಣದ ಟರ್ಮಿನಲ್ ಒಳಗೂ ನೀರು ನುಗ್ಗಿದ್ದರಿಂದ ಜನರು ಸಾಕಷ್ಟು ಸಮಸ್ಯೆ ಅನುಭವಿಸಿದ್ರು. ವಿಮಾನ ನಿಲುಗಡೆ ಸ್ಥಳದಲ್ಲಿ ನೀರು ನಿಂತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಳೆಯ ರೌದ್ರಾವತಾರಕ್ಕೆ ವಿಮಾನ ಸಂಚಾರ ರದ್ದುಗೊಂಡಿದೆ. ಇಂದೂ ಮಳೆ ಮುಂದುವರಿದರೆ ವಿಮಾನ ಹಾರಾಟದಲ್ಲಿ ಮತ್ತೆ ವ್ಯತ್ಯಾಯವಾಗುವ ಸಾಧ್ಯತೆ ಇದೆ.
ಅಂಡರ್‌ಪಾಸ್ಗೆ ನುಗ್ಗಿದ ಮಳೆ ನೀರು
ದೆಹಲಿಯಲ್ಲಿ ಭಾರಿ ಮಳೆಯಿಂದ ಜಲಾವೃತವಾದ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಬಸ್‌ನಿಂದ ಸುಮಾರು 40 ಪ್ರಯಾಣಿಕರನ್ನ ರಕ್ಷಿಸಲಾಗಿದೆ. ಪಾಲಂ ಫ್ಲೈಓವರ್ ಅಂಡರ್‌ಪಾಸ್‌ನಲ್ಲಿ ಖಾಸಗಿ ಬಸ್ ಸಿಲುಕಿತ್ತು. ಮಥುರಾ ಕಡೆಗೆ ಈ ಬಸ್ ತೆರಳುತ್ತಿತ್ತು. ಮಹಿಳೆಯರು, ಮಕ್ಕಳು ಬಸ್ನಲ್ಲಿ ಪರದಾಡುತ್ತಿದ್ದರು. ಸುದ್ದಿ ತಿಳಿದ ತಕ್ಷಣ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರಯಾಣಿಕರನ್ನ ರಕ್ಷಿಸುವಲ್ಲಿ ಯಶಸ್ವಿಯಾದ್ರು. ಇದು ಕೇವಲ ಒಂದು ಪ್ರದೇಶದ ಕಥೆಯಲ್ಲ. ದೆಹಲಿಯ ಮೋತಿ ಬಾಘ್, ಆರ್.ಕೆ.ಪುರ, ಮಧು ವಿಹಾರ್, ಹರಿನಗರ, ರೋಹ್ತಕ್ ರಸ್ತೆ, ಬದರ್‌ಪುರ್, ಸೋಮ್ ವಿಹಾರ, ವರ್ತುಲ ರಸ್ತೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದು ದೆಹಲಿಯ ಪರಿಸ್ಥಿತಿಯಾದರೆ ಒಡಿಶಾದಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ವಾರ್ನಿಂಗ್ ಕೊಡ್ಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ನಡುವೆ ಮುಂದಿನ 5 ದಿನಗಳ ಕಾಲ ತೆಲಂಗಾಣ, ಕರಾವಳಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.