Breaking News

ಸಚಿವ ಸ್ಥಾನಕ್ಕಾಗಿ ತೆರೆಮರೆ ಲಾಬಿ ಮತ್ತೆ ಚುರುಕು

Spread the love

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಬಳಿಕ ತಲೆದೋರಿದ ಅಸಮಾಧಾನ ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸಿದ್ದರೆ, ಸಚಿವ ಸ್ಥಾನಕ್ಕಾಗಿ ತೆರೆಮರೆ ಲಾಬಿ ಮತ್ತೆ ಚುರುಕಾಗಿದೆ. ಖಾಲಿ ಇರುವ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಪ್ರಬಲರಿಬ್ಬರಿಗೆ ಮೀಸಲಿಟ್ಟರೆ, ಉಳಿದ ಎರಡು ಸ್ಥಾನಗಳಿಗೆ ಎರಡು ಡಜನ್ ಆಕಾಂಕ್ಷಿಗಳನ್ನು ಸಂಭಾಳಿಸುವುದು ಪಕ್ಷದ ವರಿಷ್ಠರು ಹಾಗೂ ಬೊಮ್ಮಾಯಿಗೆ ದೊಡ್ಡ ಸವಾಲಾಗಲಿದೆ.

ಪ್ರಾಮಾಣಿಕ ಶಾಸಕರಿಗೆ ಅವಕಾಶ ನೀಡುವ ಉದ್ದೇಶದಿಂದ ಸಿಎಂ ಶೀಘ್ರವೇ ಸಚಿವ ಸಂಪುಟ ವಿಸ್ತರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್ ಸುಳಿವು ನೀಡಿದ್ದಾರೆ. ಇದರಿಂದಾಗಿ ಆಕಾಂಕ್ಷಿಗಳಲ್ಲಿ ಹೊಸ ಆಸೆ ಗರಿಗೆದರಿದೆ. ಪರಿಸ್ಥಿತಿ ತಿಳಿಯಾಗುವ ತನಕ ವಿಸ್ತರಣೆ ಸಾಧ್ಯವಿಲ್ಲ ಎಂದುಕೊಂಡಿದ್ದವರು ಸ್ಥಾನ ಕುದುರಿಸಿಕೊಳ್ಳುವ ಪೈಪೋಟಿಗೆ ಇಳಿದಿದ್ದಾರೆ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆಗೆ ಬೊಮ್ಮಾಯಿ ಕೈಹಾಕಬಹುದು ಎಂಬ ತರ್ಕದ ಮೇಲೆ ಒತ್ತಡ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಲೆಕ್ಕಾಚಾರ: ಪರಿಶಿಷ್ಟ ಜಾತಿಗಳ ಬಲಗೈ ನಾಯಕರ ಕೊರತೆ ನೀಗಿಸಲೆಂದು ಚಾಮರಾಜನಗರ ಜಿಲ್ಲೆ ಶಾಸಕ ಎನ್.ಮಹೇಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ಅವರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ ಎನ್ನುವುದು ಪಕ್ಷದ ಮೂಲಗಳು ಹೇಳಿವೆ. ಸಿ.ಡಿ. ಪ್ರಕರಣದಿಂದ ರಮೇಶ್ ಜಾರಕಿಹೊಳಿ ಮುಕ್ತರಾದ ಬಳಿಕ ಅವರಿಗೂ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿ. ಮಹೇಶ್ ಕುಮಠಳ್ಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಡ ಹೇರಿದ್ದಾರೆ. ಈ ಲೆಕ್ಕಾಚಾರಗಳಿಗೆ ವರಿಷ್ಠರು ಮಣೆ ಹಾಕಿದರೆ, ಉಳಿದ ಒಂದು ಸ್ಥಾನವನ್ನು ಯಾರಿಗೆ ನೀಡಿದರೂ ಅಸಮಾಧಾನ ನಿವಾರಣೆಯಾಗುವ ಬದಲು ಭುಗಿಲೇಳುವ ಸಾಧ್ಯತೆಯೇ ಹೆಚ್ಚು. ರಾಜೂಗೌಡ, ಎಂ.ಪಿ.ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ, ಪೂರ್ಣಿಮಾ ಶ್ರೀನಿವಾಸ್, ದತ್ತಾತ್ರೇಯ ಪಾಟೀಲ್ ರೇವೂರು, ಮಾಡಾಳು ವಿರೂಪಾಕ್ಷಪ್ಪ, ಅಪ್ಪಚ್ಚು ರಂಜನ್, ಸಿ.ಪಿ.ಯೋಗೇಶ್ವರ್, ಎಸ್.ಎ.ರಾಮದಾಸ್ ಹೀಗೆ ಪ್ರಬಲ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ದೆಹಲಿ ಭೇಟಿ ವೇಳೆ ಚರ್ಚೆ ನಿರೀಕ್ಷೆ: ಸಿಎಂ ಬೊಮ್ಮಾಯಿ ಆ.25 ಅಥವಾ 26ರಂದು ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿದ್ದು, ಇದೇ ಸಂದರ್ಭದಲ್ಲಿ ಖಾಲಿ 4 ಸ್ಥಾನಗಳ ಭರ್ತಿ ಬಗ್ಗೆ ರ್ಚಚಿಸುವ ನಿರೀಕ್ಷೆಯಿದೆ. ಸಚಿವ ಸ್ಥಾನ ವಂಚಿತ ಆರ್.ಶಂಕರ್, ಸಿ.ಪಿ.ಯೋಗೇಶ್ವರ್, ಎಸ್.ಎ.ರಾಮದಾಸ್ ಇನ್ನಿತರರಿಗೆ ನೀಡಿದ ಭರವಸೆಯಂತೆ ಅಸಮಾಧಾನದ ಕುರಿತು ವರಿಷ್ಠರ ಮುಂದೆ ಪ್ರಸ್ತಾಪಿಸಲಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ