ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಠಾಣೆಯ ವ್ಯಾಪ್ತಿಯ 13 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿ ಗೊಂದಲ ಸೃಷ್ಟಿಸಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ರಾಜೇಂದ್ರನಗರದ ನಿವಾಸಿ ಎಸ್.ದರ್ಶನ್ (21) ಬಂಧಿತ ಆರೋಪಿ. ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
‘ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವ ಸಿಕ್ಕಿಬಿದ್ದ. ಆದರೆ, ಅವನಿಗೆ ₹ 10 ಸಾವಿರ ದಂಡ ಹಾಗೂ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿ ಕಳುಹಿಸಿದ್ದಾರೆ. ಹಾಗಾದ್ರೆ ₹ 10 ಸಾವಿರ ಇರುವವರು ಏನ್ ಬೇಕಾದ್ರು ಮಾಡ್ಬಹುದಾ…?’ ಎಂಬ ಸಂದೇಶವನ್ನು ‘ಚಿತ್ರದುರ್ಗ ಟ್ರೋಲ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆರೋಪಿ ಹಂಚಿಕೊಂಡಿದ್ದನು. ಇದು ಫೇಸ್‌ಬುಕ್ ಹಾಗೂ ವಾಟ್ಸ್‌ಆಯಪ್‌ನಲ್ಲಿ ಹರಿದಾಡಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
‘ಐಪಿಸಿ ಕಲಂ 505ರ ಪ್ರಕಾರ ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ಸುಳ್ಳು ಮಾಹಿತಿ, ತಪ್ಪು ಸಂದೇಶ ರವಾನಿಸುವುದು ಅಪರಾಧ. ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಹೇಳಿಕೆ, ವದಂತಿ ಹಬ್ಬಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ರೀತಿಯ ವದಂತಿಯನ್ನು ಹಬ್ಬಿಸಬಾರದು. ತಪ್ಪು ಮಾಹಿತಿ ಇರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು. ಇಂತಹ ಸಂದೇಶ ಕಂಡುಬಂದರೆ ಪೊಲೀಸರ ಗಮನಕ್ಕೆ ತರಬೇಕು’ ಎಂದು ಮನವಿ ಮಾಡಿದ್ದಾರೆ.
Laxmi News 24×7