ಬೆಳಗಾವಿ: ಹಿರಣ್ಯಕೇಶಿ ನದಿ ಪ್ರವಾಹದಿಂದ ಮನೆ ಕುಸಿದು ಬಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಗ್ರಿ ಕೊಚ್ಚಿಕೊಂಡು ಹೋಗಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಬಾಲಕಿಯ ಕಣ್ಣೀರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ನಿಸರ್ಗ ದೇಸಾಯಿ ಎಂಬ ಎಂಟು ವರ್ಷದ ಬಾಲಕಿ ಪುಸ್ತಕ, ಆಟಿಕೆ ಸಾಮಾಗ್ರಿ, ಟಿವಿ ಕಳೆದುಕೊಂಡು ಕಣ್ಣೀರಿಟ್ಟಿದ್ದಳು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದಾರೆ. ಬಾಲಕಿಗೆ ಪುಸ್ತಕ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಬಿದ್ದ ಮನೆಯಲ್ಲೇ ಎರಡು ದಿನದಿಂದ ಜೀವನ ಸಾಗಿಸುತ್ತಿರುವ ಬಾಲಕಿ ನಿಸರ್ಗ ಕುಟುಂಬದ ಅಳಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಲುಪಿದೆ. ಡಿಸಿ ಎಂ.ಜಿ ಹಿರೇಮಠಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ತಹಸೀಲ್ದಾರಗೆ ಸ್ಥಳಕ್ಕೆ ತೆರಳಿ ಬಾಲಕಿ ಕುಟುಂಬಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.