Breaking News

ಕೋಮು ಸೌಹಾರ್ದ: ಅನಾಥೆಯನ್ನು ಮಗಳಂತೆ ಪೋಷಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ

Spread the love

ವಿಜಯಪುರ: ತಂದೆ, ತಾಯಿ, ಅಜ್ಜಿ ಎಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿಯೊಬ್ಬಳನ್ನು (Hindu) ಮಗಳಂತೆಯೇ ಸಾಕಿದ ಮುಸ್ಲಿಂ (Muslim) ವ್ಯಕ್ತಿ ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ (Marriage) ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ. ಕಳೆದ 13 ವರ್ಷಗಳ ಹಿಂದೆ ಬಾಲಕಿಯ ತಂದೆ ತಾಯಿ ಮೃತಪಟ್ಟಿದ್ದರು. ಬಳಿಕ ಆಕೆ ಅಜ್ಜಿಯೊಂದಿಗೆ ವಾಸವಿದ್ದಳು. ಆದರೆ ಕೆಲಕಾಲದ ನಂತರ ಅಜ್ಜಿಯೂ ತೀರಿಕೊಂಡಿದ್ದರಿಂದ ದಿಕ್ಕಿಲ್ಲದೇ ಅನಾಥಳಾಗಿದ್ದಳು. ಈ ಸಂದರ್ಭದಲ್ಲಿ ಪತ್ನಿ ಹಾಗೂ ನಾಲ್ವರು ಮಕ್ಕಳ ಜತೆಗೆ ಆ ಬಾಲಕಿಗೂ ಆಶ್ರಯ ನೀಡಿದ ಮೆಹಬೂಬ್ ಮಸಳಿ ಎಂಬುವವರು ಬಾಲಕಿಗೆ ಅನಾಥ ಭಾವ ಕಾಡದಂತೆ ನೋಡಿಕೊಂಡು ಸ್ವಂತ ಮಗಳಂತೆಯೇ ಪೋಷಿಸಿದ್ದಾರೆ. ಇದೀಗ ಆಕೆ ಮದುವೆ ವಯಸ್ಸಿಗೆ ಬರುತ್ತಿದ್ದಂತೆಯೇ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಕೊಟ್ಟಿದ್ದಾರೆ.

ನಿನ್ನೆ (ಜುಲೈ 30) ಮೆಹಬೂಬ್ ಮಸಳಿ ತನ್ನ ಸಾಕು ಮಗಳಿಗೆ ಹಿಂದೂ ಸಂಪ್ರದಾಯದಂತೆ ವಿವಾಹ ಮಾಡಿದ್ದು, ವಿಜಯಪುರ ಜಿಲ್ಲೆ ಆಲಮೇಲ‌ ಪಟ್ಟಣ ಈ ಘಟನೆಗೆ ಸಾಕ್ಷಿಯಾಗಿದೆ. ಪೂಜಾ ಒಡಗೇರಿ (20 ವರ್ಷ) ಎಂಬಾಕೆಗೆ ನಿನ್ನೆ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಿದ ಮೆಹಬೂಬ್ ಮಸಳಿ, ಆಕೆಯ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ.

ಭಾವೈಕ್ಯತೆಗೆ ಸಾಕ್ಷಿಯಾದ ವಿವಾಹ

ಬಸವನಬಾಗೇವಾಡಿ ತಾಲೂಕಿನ ಸಾರವಾಡ ಗ್ರಾಮದ ಶಂಕರಪ್ಪ ಕುಂದರವಾಲೆಯೊಂದಿಗೆ ಪೂಜಾ ಒಡಗೇರಿಗೆ ವಿವಾಹ ಮಾಡಲಾಗಿದ್ದು, ಹಿಂದೂ ಬಾಲಕಿಯನ್ನು ಪೋಷಿಸಿ, ವಿವಾಹ ಮಾಡುವ ಮೂಲಕ ಮೆಹಬೂಬ್ ಭಾವೈಕ್ಯತೆ ಮೆರೆದಿದ್ದಾರೆ. ಮೆಹಬೂಬ್ ಮಸಳಿ ಹಾಗೂ ಕುಟುಂಬದ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಾತಿ, ಧರ್ಮ, ಸಮುದಾಯಗಳ ಹೆಸರಿನಲ್ಲಿ ತಿಕ್ಕಾಟ ನಡೆಯುತ್ತಿರುವ ಈ ಕಾಲದಲ್ಲಿ ಇಂತಹ ಘಟನೆಗಳು ಭಾವೈಕ್ಯತೆಗೆ ಸಾಕ್ಷಿಯಾಗಿದ್ದು, ಮನುಷ್ಯ, ಮನುಷ್ಯರ ನಡುವೆ ಪ್ರೀತಿ, ಸೌಹಾರ್ದತೆಯೇ ಮುಖ್ಯ ಅದಕ್ಕಿಂತ ಮುಖ್ಯವಾಗಿದ್ದು ಏನೂ ಇಲ್ಲ. ಜಾತಿ ಧರ್ಮಗಳ ಹೆಸರಿನಲ್ಲಿ ಬಿರುಕು ಮೂಡಿಸುವುದು, ಮನಸ್ತಾಪ ಸೃಷ್ಟಿಸುವುದು ತಪ್ಪು ಎನ್ನುವುದಕ್ಕೆ ಉತ್ತಮ ಉದಾಹರಣೆಯಂತಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ