ನವದೆಹಲಿ: ಆಕೆ ಇನ್ನೂ ಕಾಲೇಜಿನ ಮೆಟ್ಟಿಲೇರಿದ ದಿನಗಳವು. ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಹಿಡಿದು, ತಾನಿಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಬೇಕೆಂಬ ಆಸೆ ಆಕೆಗಿತ್ತು. ಆದರೆ, ಮನೆಯಲ್ಲಿ ಆಕೆಗೆ ಇಷ್ಟವಿಲ್ಲದಿದ್ದರೂ 18ನೇ ವಯಸ್ಸಿಗೆ ಮದುವೆ ಮಾಡಿದ್ದರು. ಆದರೆ, ಆಕೆಯ ಮನಸಿನಲ್ಲಿ ಆತನಿಗೆ ಜಾಗವಿರಲಿಲ್ಲ. ಹೀಗಾಗಿ, ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಗಂಡನನ್ನು ಕೊಲೆ (Murder) ಮಾಡಿದ್ದ ಆಕೆ ಆತನ ಶವವನ್ನು (Dead Body) ಸುಟ್ಟು ಹಾಕಿದ್ದಳು. ಅದೆಲ್ಲ ಆಗಿ ಬರೋಬ್ಬರಿ 10 ವರ್ಷಗಳೇ ಕಳೆದರೂ ಪೊಲೀಸರಿಗೆ ಆಕೆಯನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಇದೀಗ ಆಕೆ ತನ್ನ ಬಾಯ್ಫ್ರೆಂಡ್ (Boyfriend) ಜೊತೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕೊಲೆ ನಡೆದು 10 ವರ್ಷಗಳ ಬಳಿಕ ಕೊಲೆಗಾರ್ತಿ ಜೈಲು ಸೇರಿದ್ದಾಳೆ.
2011ರಲ್ಲಿ ದೆಹಲಿಯ ಶಕುಂತಲಾ ಎಂಬ 18 ವರ್ಷದ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ರವಿ ಕುಮಾರ್ ಎಂಬಾತನ ಜೊತೆ ಮದುವೆ ಮಾಡಲಾಗಿತ್ತು. ರವಿ ಕುಮಾರ್ ಜೊತೆ ಬದುಕಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಶಕುಂತಲಾಗೆ ತಾನಿಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಬೇಕೆಂಬ ಆಸೆಯಿತ್ತು. ಹೀಗಾಗಿ, ಆಕೆ ಮತ್ತು ಆಕೆಯ ಬಾಯ್ಫ್ರೆಂಡ್ ಕಮಲ್ ಸಿಂಗ್ಲಾ ಸೇರಿ ರವಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದರು.
ರವಿಯನ್ನು ಕೊಲೆ ಮಾಡಿದ ಶಕುಂತಲಾ ಮತ್ತು ಕಮಲ್ ಸಿಂಗ್ಲಾ ಆತನ ಹೆಣವನ್ನು ಕಮಲ್ನ ಬ್ಯುಸಿನೆಸ್ ಇದ್ದ ರಾಜಸ್ಥಾನದ ಅಲ್ವಾರ್ಗೆ ತೆಗೆದುಕೊಂಡು ಹೋಗಿ ಸುಟ್ಟುಹಾಕಿದ್ದರು. ರವಿ ಎಲ್ಲಿ ಹೋಗಿದ್ದಾನೆಂದು ಇದರಿಂದ ಪೊಲೀಸರಿಗೆ ಸುಳಿವು ಸಿಗುವುದಿಲ್ಲ ಎಂಬುದು ಅವರ ಪ್ಲಾನ್ ಆಗಿತ್ತು. ಅದಾದ ಸ್ವಲ್ಪ ಸಮಯದ ನಂತರ ರವಿಯನ್ನು ಸುಟ್ಟ ಜಾಗದಲ್ಲಿ ಬಿದ್ದಿದ್ದ ಮೂಳೆಗಳನ್ನು ಅಲ್ಲಿಂದ 70 ಕಿ.ಮೀ. ದೂರದಲ್ಲಿದ್ದ ಹೈವೇ ಬಳಿ ಬಿಸಾಡಿದ್ದರು. ದೆಹಲಿಯಲ್ಲಿ ಕಾಣೆಯಾದ ರವಿ ರಾಜಸ್ಥಾನದಲ್ಲಿ ಹೆಣವಾಗಿದ್ದ. ಅಲ್ಲಿಂದ ಹರಿಯಾಣದ ಬಳಿ ಆತನ ಮೂಳೆಗಳನ್ನು ಎಸೆದಿದ್ದರಿಂದ ಪೊಲೀಸರಿಗೆ ಈ ಕೊಲೆಯ ರಹಸ್ಯವನ್ನು ಭೇದಿಸಲು ಸಾಧ್ಯವಿಲ್ಲ ಎಂಬುದು ಅವರಿಬ್ಬರ ಲೆಕ್ಕಾಚಾರವಾಗಿತ್ತು.
ರವಿ ಕುಮಾರ್ ನಿಗೂಢವಾಗಿ ನಾಪತ್ತೆಯಾಗಿದ್ದರ ಹಿಂದಿನ ಕೈವಾಡವನ್ನು ಬಗೆಹರಿಸಲಾಗದೆ ಪೊಲೀಸರು ಕೈಚೆಲ್ಲಿದ್ದರು. ಶಕುಂತಲಾ ಎಲ್ಲಿದ್ದಾಳೆಂಬ ಬಗ್ಗೆಯೂ ಪೊಲೀಸರಿಗೆ ಸುಳಿವು ಸಿಗಲಿಲ್ಲ. ಈ ಗಲಾಟೆಯೆಲ್ಲ ತಣ್ಣಗಾದ ಬಳಿಕ 6 ವರ್ಷಗಳ ನಂತರ 2017ರಲ್ಲಿ ಶಕುಂತಲಾ ಮತ್ತು ಕಮಲ್ ಸಿಂಗ್ಲಾ ಮದುವೆಯಾಗಿದ್ದರು. ರವಿ ಕುಮಾರ್ ಸಾವಿನ ಪ್ರಕರಣದಲ್ಲಿ ಏನೂ ಸಾಕ್ಷಿಗಳು ಸಿಗದ ಕಾರಣ ಈ ಪ್ರಕರಣ ಕ್ರೈಂ ಬ್ರಾಂಚ್ಗೆ ವರ್ಗಾವಣೆಯಾಗಿತ್ತು.
2018ರಲ್ಲಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕ್ರೈಂ ಬ್ರಾಂಚ್ ಪೊಲೀಸರು ರಾಜಸ್ಥಾನದಲ್ಲಿ ಶಕುಂತಲಾ ಇರುವುದನ್ನು ಪತ್ತೆಹಚ್ಚಿದ್ದರು. ತಕ್ಷಣ ಕಾರ್ಯೋನ್ಮುಖರಾದ ಅವರು ರಾಜಸ್ಥಾನಕ್ಕೆ ತೆರಳಿ ಕಮಲ್ ಸಿಂಗ್ಲಾನನ್ನು ಬಂಧಿಸಿದ್ದರು. ಆದರೆ, ಆ ಜಾಗದಿಂದ ಶಕುಂತಲಾ ತಪ್ಪಿಸಿಕೊಂಡಿದ್ದಳು. ಆಕೆಯನ್ನು ಹುಡುಕಿಕೊಟ್ಟವರಿಗೆ 50,000 ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಹೀಗಾಗಿ, ಸ್ಥಳೀಯರೊಬ್ಬರು ಆಕೆಯ ಬಗ್ಗೆ ಸುಳಿವು ನೀಡಿದ್ದರಿಂದ ಈಗ ಕೊನೆಗೂ ಶಕುಂತಲಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಶಕುಂತಲಾ, ನಾನು ಕಮಲ್ ಜೊತೆಗೆ ಸಂಬಂಧ ಹೊಂದಿದ್ದ ವಿಷಯ ನನ್ನ ಗಂಡ ರವಿಗೆ ಗೊತ್ತಾಗಿತ್ತು. ಹೀಗಾಗಿ, ನನ್ನನ್ನು ಮನೆಯಿಂದ ಹೊರಗೆ ಹೋಗಲು ಬಿಡದೆ, ಫೋನ್ ಸಂಪರ್ಕವನ್ನೂ ಕಡಿತಗೊಳಿಸಿ ಮನೆಯೊಳಗೆ ಕೂಡಿಹಾಕಿದ್ದ. ಹೀಗಾಗಿ, ಆತನನ್ನು ಕೊಲೆ ಮಾಡು ನಿರ್ಧರಿಸಿದೆ ಎಂದು ಹೇಳಿದ್ದಾಳೆ.