ಬೆಂಗಳೂರು: ಕೊರೊನಾದಿಂದ ರದ್ದಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 20 ರಂದು ಪ್ರಕಟವಾಗಲಿದೆ. ಈಗಾಗಲೇ ಫಲಿತಾಂಶ ಪ್ರಕಟ ಮಾಡಲು ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ. ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಅಂತ ಪಬ್ಲಿಕ್ ಟಿವಿಗೆ ಪಿಯುಸಿ ಬೋರ್ಡ್ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ.
ಜುಲೈ 20 ರಂದು ಇಲಾಖೆಯ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ. ಹೀಗಾಗಿ ಅಂಕಗಳ ಮಾದರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು ಫಲಿತಾಂಶ ನೋಡಲು ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಇಲಾಖೆ ವೆಬ್ ಸೈಟ್ ನಲ್ಲಿ “Know my registration number”ಲಿಂಕ್ ನೀಡಿ ಆ ಲಿಂಕ್ ಮೂಲಕ ಪ್ರತಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪಡೆಯಬಹುದು. ಇಂದಿನಿಂದ ಈ ಲಿಂಕ್ ಓಪನ್ ಆಗಲಿದೆ ಅಂತ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಇಮೇಲ್ ಮತ್ತು ಮೊಬೈಲ್ ಗೆ ಪಿಯುಸಿ ಬೋರ್ಡ್ ಲಿಂಕ್ ಕಳಿಸಿ ಕೊಡಲಿದೆ.
ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನ ಸರ್ಕಾರ ಪಾಸ್ ಮಾಡಿತ್ತು. ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲು ವಿದ್ಯಾರ್ಥಿಯು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಶೇ.45 ಅಂಕ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಡೆದ ಶೇ.45 ಅಂಕ ಹಾಗೂ ಶೇ.10 ಇಂಟರ್ನಲ್ ಅಸೆಸ್ಮೆಂಟ್ ಅಂಕಗಳ ಆಧಾರದಲ್ಲಿ ಈ ವರ್ಷ ಪಿಯುಸಿ ಬೋರ್ಡ್ ಫಲಿತಾಂಶ ಪ್ರಕಟ ಮಾಡಲಿದೆ. ಒಂದು ವೇಳೆ ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳು ಬಯಸಿದರೆ ಮತ್ತೆ ಪರೀಕ್ಷೆ ಬರೆಯಲು ಬೋರ್ಡ್ ಅವಕಾಶ ಮಾಡಿಕೊಡಲಿದೆ.