ಬೆಂಗಳೂರು: ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದ ಎರಡನೇ ಹಂತದ ಕಟ್ಟಡ ಕಾಮಗಾರಿ, ಲ್ಯಾಬರೇಟರಿ, ಚಿಕಿತ್ಸಾ ಯಂತ್ರೋಪಕರಣಗಳು ಸೇರಿದಂತೆ ಅವಶ್ಯಕ ಸೌಕರ್ಯ ಪೂರ್ಣಗೊಳಿಸಲು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ರೂ.30 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಲಯವಾರು ಪ್ರಾದೇಶಿಕ ಅಸಮತೋಲನೆ ಕುರಿತು ಡಾ.ನಂಜುಂಡಪ್ಪನವರ ವರದಿ ಅನ್ವಯ 2009ರಲ್ಲಿಯೇ ಪಶುವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಲು ರೂ.50 ಕೋಟಿಗೆ ಅಂದು ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಗದಗ ಜಿಲ್ಲಾಧಿಕಾರಿ ಮೂಲಕ 156.21 ಎಕರೆ ಜಮೀನನ್ನು ಸ್ವಾಧಿನಪಡಿಸಿಕೊಳ್ಳಲಾಗಿದ್ದು ಈಗಾಗಲೇ ಮೊದಲನೇ ಹಂತದ ಕಾಮಗಾರಿ ರೂ.30.16 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು ಭಾರತೀಯ ಪಶುವೈದ್ಯಕೀಯ ಪರಿಷತ್ತು ಗದಗ ಜಿಲ್ಲೆಗೆ ಭೇಟಿ ನೀಡಿ ಇನ್ನೂ ಹಲವು ಮೂಲಭೂತ ಸೌಕರ್ಯಗಳ ಅವಶ್ಯಕೆತೆ ಇರುವುದರ ಕುರಿತು ವರದಿ ನೀಡಿತ್ತು. ಇದರ ಅನ್ವಯ ಗದಗ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಕುಂದುಕೋರತೆಗಳನ್ನು ಸಚಿವರು ಖುದ್ದಾಗಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಈ ಕುರಿತಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಅವರ ಜೊತೆ ಸಭೆ ನಡೆಸಲಾಗಿತ್ತು ಎಂದರು.