ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಹಗಲು ಹೊತ್ತಲ್ಲೇ ರಾಜಾರೋಷವಾಗಿ ಬಂದು ಕಳ್ಳತನ ಮಾಡುತ್ತಾರೆ. ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ಕದ್ದೊಯ್ದರೂ ಹೇಳೋರಿಲ್ಲ ಕೇಳೋರಿಲ್ಲ ಅನ್ನೋವಂತಾಗಿದೆ.
ಹೌದು. ಹಗಲು ಹೊತ್ತಲ್ಲಿಯೇ ಮನಗೆ ನುಗ್ಗಿ ಕಳ್ಳನೊಬ್ಬ ತನ್ನ ಕೈಚಳಕ ತೋರಿರುವುದು ಸಿಸಿಟಿವಿಯಲ್ಲಿ ಬಯಲಾಗಿದೆ. ಈ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯ ವೀರನಪಾಳ್ಯದಲ್ಲಿ ನಡೆದಿದೆ. ವೀರನಪಾಳ್ಯದಲ್ಲಿರುವ ಸೋನಾ ಟವರ್ ಅಪಾರ್ಟ್ ಮೆಂಟ್ ನ ಮೊದಲನೇ ಮಹಡಿಯಲ್ಲಿ ಈ ಕಳ್ಳತನ ನಡೆದಿದೆ.
ಖದೀಮ 4 ಮಹಡಿಯ ಇಡೀ ಅಪಾರ್ಟ್ ಮೆಂಟ್ ಫುಲ್ ಹುಡುಕಾಡಿದ್ದಾನೆ. ಐದು ನಿಮಿಷ ಬಾಗಿಲು ಓಪನ್ ಮಾಡಿದ್ದೇ ಲ್ಯಾಪ್ ಟಾಪ್ ಮಾಯವಾಗಿದೆ. ಬಾಗಿಲು ಓಪನ್ ಇರುವ ಮನೆ ನೋಡಿ ಕಳ್ಳ ಒಳನುಗ್ಗಿದ್ದಾನೆ. ಸೂಟು ಬೂಟು ಹಾಕಿಕೊಂಡು ಕಳ್ಳ ಎಂಟ್ರಿ ಕೊಟ್ಟಿದ್ದಾನೆ. ಒಬ್ಬನೇ ಪಕ್ಕಾ ಅಫಿಷಿಯಲ್ ರೀತಿ ಬಂದ ಅಸಾಮಿ ಲ್ಯಾಪ್ ಟಾಪ್ ಕದ್ದು ಪರಾರಿಯಾಗಿದ್ದಾನೆ.
ಸ್ನೇಹ ಎಂಬ ವಿದ್ಯಾರ್ಥಿನಿಯ ಲ್ಯಾಪ್ ಟಾಪ್ ಕದ್ದೊಯ್ದಿದ್ದಾನೆ. ಸ್ನೇಹ ಬಾಗಿಲು ಓಪನ್ ಇಟ್ಟು ಬಾಲ್ಕನಿಯಲ್ಲಿದ್ದಳು. ಇತ್ತ ತಾಯಿ ಬೆಡ್ ರೂಂ ನಲ್ಲಿ ಮಲಗಿದ್ದರು. ಈ ವೇಳೆ ಹಾಲ್ ನಲ್ಲಿ ಯಾರೂ ಇಲ್ಲದಿರುವುದನ್ನು ಕಿಟಕಿ ಮೂಲಕ ನೋಡಿ ಖಾತರಿ ಪಡಿಸಿಕೊಂಡ ಅಸಾಮಿ, ನಂತರ ಒಳಗೆ ನುಗ್ಗಿ ಡೈನಿಂಗ್ ಟೇಬಲ್ ನಲ್ಲಿ ಇದ್ದ ಲ್ಯಾಪ್ ಟಾಪ್ ಕದ್ದು ಎಸ್ಕೇಪ್ ಆಗಿದ್ದಾನೆ.
ಕಳ್ಳತನ ಕೃತ್ಯ ಅಪಾರ್ಟ್ ಮೆಂಟ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಕೂಡ ಸೋನ ಟವರ್ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನ ನಡೆದಿದ್ದು, ಬೆಳಗ್ಗಿನ ಜಾವ 5.30 ರ ಸುಮಾರಿಗೆ ಬಂದು ಮೊಬೈಲ್ ಕದ್ದೊಯ್ಯಲಾಗಿದೆ.
ಲ್ಯಾಪ್ ಟಾಪ್ ಕಳ್ಳತನ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.