ರಾಮನಗರ: ರೇಣುಕಾಚಾರ್ಯ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ. ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿದೆ. ಆತನ ಕ್ಷೇತ್ರಕ್ಕೆ ಸರ್ಕಾರದಿಂದ ಸಾವಿರಾರು ಕೋಟಿ ರೂ. ಸಿಕ್ಕಿದೆ ಎಂದರೆ ಅಲ್ಲಿ ನನ್ನ ಶ್ರಮವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ರಾಮನಗರ ತಾಲೂಕಿನ ಬಿಡದಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರೇಣುಕಾಚಾರ್ಯ ಅರೋಪಕ್ಕೆ ಏಕವಚನದಲ್ಲಿ ಪ್ರತಿಕ್ರಿಯೆ ನೀಡಿದರು.
ನನ್ನ ಮಾತಿಗೆ ನಾನು ಬದ್ದವಾಗಿದ್ದೇನೆ. ನನ್ನ ನಿಲುವನ್ನು ಆಗಾಗ ವ್ಯಕ್ತ ಪಡಿಸುತ್ತೇನೆ. ಲೋಪಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ ಅಷ್ಟೇ, ಬೇರೆಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಸಹ ಮುಖ್ಯಮಂತ್ರಿ ಆಡಳಿತವನ್ನು ಒಪ್ಪಿದ್ದೇನೆ. ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೇ ಸರ್ಕಾರದಲ್ಲಿ ನನಾಗುತ್ತಿರುವ ನೋವನ್ನು ಒಮ್ಮೊಮ್ಮೆ ತಡೆಯಲಾರದೆ ನಿಮ್ಮೊಂದಿಗೆ ಪಕ್ಷದ ವರಿಷ್ಠರ ಜೊತೆ ಹಂಚಿಕೊಂಡಿದ್ದೇನೆ ಎಂದರು.
ನಿನ್ನೆ ಪ್ರಧಾನಿ, ಮಂತ್ರಿ ಮಂಡಳ ವಿಸ್ತರಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಗಳು ಮಾಡಬೇಕು. ನಾನು ಮೀಡಿಯಾದಲ್ಲಿ ಮಾತನಾಡಿದರೆ, ಎಚ್ ಡಿ ಕುಮಾರಸ್ವಾಮಿ ಬೆಳಗ್ಗೆ ಸಿಎಂ ಬಳಿ ಹೋಗುತ್ತಾರೆ. ರಾತ್ರಿ ಡಿ.ಕೆ. ಶಿವಕುಮಾರ್ ಹೋಗುತ್ತಾರೆ ಎಂದರು.
ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಜೊತೆ ಸಿಎಂ ಸಂಖ್ಯ ಹೊಂದಿರುವುದರಿಂದಲೇ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಆಗುತ್ತಿಲ್ಲವೆಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಧಾನ ಹೊರ ಹಾಕಿದರು.
ಬಿಜೆಪಿಗೆ ಎಲ್ಲಿಂದಲ್ಲೋ ಬಂದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ. ಜೈಲಿಗೆ ಹೋದವರನ್ನು ನಾವು ಸೇರಿಸಿಕೊಳ್ಳುವುದಿಲ್ಲವೆಂದು ಕಾಂಗ್ರೆಸ್ ಗೆ ಬರುವಂತೆ ಆಹ್ವಾನಿಸಿರುವ ಡಿಕೆಶಿಗೆ ಸಿಪಿವೈ ತಿರುಗೇಟು ಕೊಟ್ಟರು.
ಕೆಆರ್ ಎಸ್ ಸುತ್ತಲೂ ಕಲ್ಲುಗಣಿಗಾರಿಕೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಈ ಬಗ್ಗೆ ಮಂಡ್ಯ ಸಂಸದರಿಗೆ ಆತಂಕ ಇರಬೇಕು.ಅವರು ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಮಾತನಾಡಿರುವುದು ಸರಿಯಲ್ಲ ಎಂದರು.
ಎಚ್.ಡಿ.ಕೆಗೆ ಹತಾಶಾ ಮನೋಭಾವವಿದೆ. ಮಂಡ್ಯದಲ್ಲಿ ಅವರ ಮಗ ಸೋತಿದ್ದಾನೆ. ಉತ್ತರ ಕರ್ನಾಟದಕಲ್ಲಿ ಜಿಡಿಎಸ್ ಗೆ ನೆಲೆ ಇಲ್ಲ. ಆದ್ದರಿಂದ ಅವರು ಮಂಡ್ಯ ಬಿಡಲು ಸಿದ್ದರಿಲ್ಲ ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.