ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಬಳಿ ಬಟ್ಟೆ, ಹೊದಿಕೆ ಮೊದಲಾದವುಗಳನ್ನು ತೊಳೆಯಲು ಕೃಷ್ಣಾ ನದಿಗೆ ಇಳಿದಿದ್ದಾಗ ಕೊಚ್ಚಿ ಹೋಗಿದ್ದ ನಾಲ್ವರು ಸಹೋದರರು ಶವವಾಗಿ ಪತ್ತೆಯಾಗಿದ್ದಾರೆ.
ಸೋಮವಾರ ಘಟನೆ ನಡೆದಿತ್ತು. ಪರಶುರಾಮ ಗೋಪಾಲ ಬನಸೋಡೆ (36) ಶವ ಮಂಗಳವಾರ ಪತ್ತೆಯಾಗಿತ್ತು. ಧರೆಪ್ಪ ಗೋಪಾಲ ಬನಸೋಡೆ (24), ಸದಾಶಿವ ಬನಸೋಡೆ (29) ಹಗೂ ಶಂಕರ ಬನಸೋಡೆ (20) ಮೃಹದೇಹವನ್ನು ಬುಧವಾರ ಹೊರತೆಗೆಯಲಾಗಿದೆ.
ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದವರು ಸ್ಥಳೀಯರು ಸಹಕಾರದೊಂದಿಗೆ ಸತತ ಕಾರ್ಯಾಚರಣೆ ನಡೆಸಿದರು.
ಪರಿಹಾರಕ್ಕೆ ಆಗ್ರಹ: ಮೃತರ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
‘ಪರಿಹಾರ ಮಂಜೂರು ಮಾಡುವವರೆಗೂ ಶವಸಂಸ್ಥಾರಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಅವರು ಪಟ್ಟು ಹಿಡಿದಿದ್ದರು.
ಮೊಬೈಲ್ ಫೋನ್‌ನಲ್ಲಿ ಮಾತನಾಡಿದ ಶಾಸಕ ಮಹೇಶ ಕುಮಠಳ್ಳಿ, ‘ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ವ್ಯವಸ್ಥೆ ಮಾಡುತ್ತೇನೆ. 15 ದಿನ ಕಾಲಾವಕಾಶ ಕೊಡಿ’ ಎಂದು ಕೋರಿದರು. ಅವರ ಭರವಸೆ ಆಧರಿಸಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು