Breaking News
Home / ರಾಜಕೀಯ / ಡೌನ್‌ಆಗಿದ್ದ ತರಕಾರಿ ಬೆಲೆ ಈಗ ಅಪ್‌

ಡೌನ್‌ಆಗಿದ್ದ ತರಕಾರಿ ಬೆಲೆ ಈಗ ಅಪ್‌

Spread the love

ಧಾರವಾಡ: ಲಾಕ್‌ಡೌನ್‌ ಅವಧಿಯಲ್ಲಿ ನಿರೀಕ್ಷಿತ ಬೆಲೆ ಸಿಗದೇ, ಮಾರಾಟವಾಗದೇ ತಿಪ್ಪೆಯ ಪಾಲಾಗುತ್ತಿದ್ದ ತರಕಾರಿ ಹಾಗೂ ಸೊಪ್ಪಿಗೆ ಇದೀಗ ಅನ್‌ಲಾಕ್‌ ನಂತರ ಬಂಪರ್‌ ಬೆಲೆ ಬಂದಿದೆ.

ಕೋವಿಡ್‌ ನಿಯಂತ್ರಣಕ್ಕೆ ಜಾರಿ ಮಾಡಿದ ಲಾಕ್‌ ಡೌನ್‌ ಹಾಗೂ ವ್ಯಾಪಾರಕ್ಕೆ ನೀಡಿದ ಸೀಮಿತ ಅವಧಿಯ ಪರಿಣಾಮ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಪ್ರತಿದಿನ ನಡೆಯುವ ಹೋಲ್‌ಸೇಲ್‌ ತರಕಾರಿ ಮಾರುಕಟ್ಟೆ ಆವರಣದಲ್ಲಿ ಬೆಲೆ ಕುಸಿತ ಹಾಗೂ ಮಾರಾಟವಾಗದ ಕಾರಣ ತರಕಾರಿ ಹಾಗೂ ಸೊಪ್ಪು ತಿಪ್ಪೆಯ ಪಾಲಾಗುತ್ತಿತ್ತು.

ಕಳೆದ ವಾರವಷ್ಟೇ ಮಧ್ಯಾಹ್ನ 2:00 ಗಂಟೆವರೆಗೆ ವ್ಯಾಪಾರ-ವಹಿವಾಟಿಗೆ ಅವಧಿ ವಿಸ್ತರಿಸಿದ ಬಳಿಕ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿತ್ತು. ಇದೀಗ ಅನ್‌ಲಾಕ್‌ನಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ಸಿಕ್ಕ ಪರಿಣಾಮ ಎಲ್ಲ ತರಕಾರಿ, ಸೊಪ್ಪಿನ ಬೆಲೆ ಏರಿಕೆ ಕಂಡಿವೆ. ಹೋಲ್‌ಸೇಲ್‌ ಹಾಗೂ ಚಿಲ್ಲರೆ ವ್ಯಾಪಾರದಲ್ಲಿನ ಬೆಲೆ 2 -3 ಪಟ್ಟು ಏರಿಕೆಯಾಗಿದ್ದು, ಇದರಿಂದ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿದೆ.

ಏರಿಕೆ ಕಂಡ ಬೆಲೆ: ಲಾಕ್‌ಡೌನ್‌ ಅವಧಿಯಲ್ಲಿ ತರಕಾರಿ ಮಾರಾಟಕ್ಕೆ ಮೊದಲು ಬೆಳಗ್ಗೆ 6:00 ರಿಂದ 10:00 ರವರೆಗೆ ಮಾತ್ರ ಅವಕಾಶ ಇತ್ತು. ಹೀಗಾಗಿ ರೈತರಿಂದ ಖರೀದಿಸಿದ ತರಕಾರಿಯನ್ನು ಬಹುತೇಕ ವ್ಯಾಪಾರಸ್ಥರು 10:00 ಗಂಟೆಯವರೆಗೆ ಮಾರುಕಟ್ಟೆಗೆ ಬಂದ ಗ್ರಾಹಕರಿಗೆ ಅಗ್ಗದ ದರದಲ್ಲಿ ಮಾರುತ್ತಿದ್ದರು. ಇನ್ನು ಕೆಲವರು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರುತ್ತಿದ್ದರು. ಈಗ ಮಾರಾಟಕ್ಕೆ ಇನ್ನಷ್ಟು ಸಮಯ ಸಿಕ್ಕಿದ್ದರಿಂದ ವ್ಯಾಪಾರಸ್ಥರು, ತರಕಾರಿ ದರವನ್ನು ಹೆಚ್ಚಿಸಿದ್ದಾರೆ. ಹಸಿಮೆಣಸು ಬಹು ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ.

ಈ ಹಿಂದೆ ಕೆಜಿಗೆ 20-25 ರೂ.ಗಳಿಗೆ ಮಾರುತ್ತಿದ್ದ ಹಸಿಮೆಣಸು ಈಗ ಕೆಜಿಗೆ 35-40 ರೂ. ಮಾರಾಟವಾಗುತ್ತಿದೆ. ಇದೇ ರೀತಿ ಟೊಮ್ಯಾಟೊ, ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ ಸೇರಿದಂತೆ ಇತರೆ ತರಕಾರಿ ಬೆಲೆಯಲ್ಲಿ ಕೆಜಿಗೆ 10 ರಿಂದ 20 ರೂ.ವರೆಗೂ ಏರಿಕೆ ಕಂಡಿದೆ. ಯಾವುದೇ ತರಕಾರಿಗೆ ಕೆಜಿಗೆ ಕನಿಷ್ಠ 40 ರೂ. ಬೆಲೆ ಇದ್ದು, ಗರಿಷ್ಠ 60 ರೂ. ದಾಟಿದೆ. ಇನ್ನು 10 ರೂ. ಗೆ 2-3 ಸಿವುಡು ಸಿಗುತ್ತಿದ್ದ ಕೋತಂಬರಿ, ಮೆಂತೆ ಸೇರಿದಂತೆ ಇತರೆ ಸೊಪ್ಪುಗಳು ಈಗ 10-15 ರೂ.ಗೆ ಒಂದು ಸಿವುಡು ಸಿಗುವಂತಾಗಿದೆ.

ಹೋಲ್‌ಸೇಲ್‌ ದರದಲ್ಲೂ ಏರಿಕೆ: ಹೋಲ್‌ಸೇಲ್‌ ತರಕಾರಿ ಮಾರುಕಟ್ಟೆಯಲ್ಲೂ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಾಗಿದೆ. 10 ರಿಂದ 12 ಕೆಜಿಯ ಬದನೆಕಾಯಿ ಬಾಕ್ಸ್‌ವೊಂದಕ್ಕೆ 200-250 ರೂ. ದರವಿತ್ತು. ಮಂಗಳವಾರ ನಡೆದ ವ್ಯಾಪಾರದಲ್ಲಿ ಈ ದರವು 600-700ಕ್ಕೆ ಏರಿದೆ. ಇದೇ ರೀತಿ ಬೀನ್ಸ್‌, ಚವಳೇಕಾಯಿ, ಹಾಗಲಕಾಯಿ, ಹಿರೇಕಾಯಿ, ಟೊಮಾಟೋ ಸೇರಿದಂತೆ ಎಲ್ಲ ತರಕಾರಿಗಳ ಹೋಲ್‌ ಸೇಲ್‌ ದರದಲ್ಲಿ 200-300 ರೂ. ಏರಿಕೆ ಕಂಡಿದೆ. ಇದರ ಜತೆಗೆ ಸೊಪ್ಪಿನ ದರದಲ್ಲೂ 100-150 ರೂ. ಏರಿಕೆ ಕಂಡಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ