ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸಿಡಿ ಯುವತಿಗೆ ಬಂಧನ ಭೀತಿ ಶುರುವಾಗಿದೆ.
ರಮೇಶ್ ಜಾರಕಿಹೊಳಿ ದೂರು ಆಧರಿಸಿ ಎಸ್ ಐಟಿ ಅಧಿಕಾರಿಗಳು ಯುವತಿಯನ್ನು ಬಂಧಿಸುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಯುವತಿ ಪರ ವಕೀಲ ಸಂಕೇತ್ ಏಣಗಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ದಾಖಲಿಸಿದ್ದರೂ ಕೂಡ ಈವರೆಗೂ ಮಾಜಿ ಸಚಿವರ ಬಂಧನವಾಗಿಲ್ಲ. ಆದರೆ ಪ್ರಕರಣದಲ್ಲಿ ಯುವತಿಯನ್ನು ಬಂಧಿಸುವಂತೆ ಒತ್ತಡ ಹೇರುತ್ತಿರುವುವಂತೆ ಕಂಡುಬರುತಿದ್ದು, ಯುವತಿಗೆ ಬಂಧನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಬಂಧಿಸದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಿಆರ್ ಪಿಸಿ 482 ಅಡಿ ಪ್ರಕರಣ ರದ್ದುಗೊಳಿಸುವಂತೆ ಯುವತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಳೆ. ಆದರೆ ಸಿಆರ್ ಪಿಸಿ 482 ಅಡಿ ಯುವತಿಯನ್ನು ಬಂಧಿಸದಂತೆ ಸೂಚಿಸಲು ಸಾಧ್ಯವಿಲ್ಲ. ಬಂಧನ ಭೀತಿಯಿದ್ದರೆ ಯುವತಿ ಪ್ರತ್ಯೇಕವಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿ ಎಂದು ಹೈಕೋರ್ಟ್ ನ್ಯಾ.ಸುನೀಲ್ ದತ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.